ಕೋಲ್ಕತ: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂದಿನ ವರ್ಷದ ಐಪಿಎಲ್ 17ನೇ ಆವೃತ್ತಿಗೆ ಕೋಲ್ಕತ ನೈಟ್ರೈಡರ್ಸ್ ತಂಡದ ನಾಯಕರಾಗಿ ಗುರುವಾರ ಮರುನೇಮಕಗೊಂಡಿದ್ದಾರೆ. ಗಾಯದಿಂದಾಗಿ ಕಳೆದ ಆವೃತ್ತಿಯನ್ನು ತಪ್ಪಿಸಿಕೊಂಡಿದ್ದ 29 ವರ್ಷದ ಶ್ರೇಯಸ್ ಬದಲಿಗೆ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ನಿತೀಶ್ ರಾಣಾ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದ ಶ್ರೇಯಸ್ ಅಯ್ಯರ್ ಬಳಿಕ ತವರಿನಲ್ಲಿ ನಡೆದ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು. ನಂತರದಲ್ಲಿ ಏಕದಿನ ವಿಶ್ವಕಪ್ನಲ್ಲೂ 4ನೇ ಕ್ರಮಾಂಕದಲ್ಲಿ ಆಡಿದ 11 ಇನಿಂಗ್ಸ್ಗಳಲ್ಲಿ 2 ಶತಕ ಮತ್ತು 3 ಅರ್ಧಶತಕಗಳ ಸಹಿತ 530 ರನ್ ಬಾರಿಸಿದ್ದರು. ವಿಶ್ವಕಪ್ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದಾಗಿದೆ.
ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮತ್ತೆ ಕೆಕೆಆರ್ ನಾಯಕತ್ವ ವಹಿಸಿಕೊಳ್ಳುತ್ತಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿರುವ ಶ್ರೇಯಸ್, "ನಿತೀಶ್ ರಾಣಾ ನನ್ನ ಗೈರಿನಲ್ಲಿ ಕಳೆದ ಆವೃತ್ತಿಯಲ್ಲಿ ತಂಡವನ್ನು ಸಮರ್ಥವಾಗಿಯೇ ಮುನ್ನಡೆಸಿದ್ದರು. ಈ ಬಾರಿ ಅವರು ಉಪನಾಯಕರಾಗಿರುವುದು ನನ್ನ ನಾಯಕತ್ವಕ್ಕೂ ಬಲ ತುಂಬಲಿದೆ' ಎಂದು ಹೇಳಿದ್ದಾರೆ. 2022ರಲ್ಲಿ 12.25 ಕೋಟಿ ರೂ.ಗಳಿಗೆ ಶ್ರೇಯಸ್ ಕೆಕೆಆರ್ ತಂಡವನ್ನು ಕೂಡಿಕೊಂಡಿದ್ದರು.