ಕ್ರೀಡೆ

VIDEO: ಟಿವಿ ಶೋನಲ್ಲಿ ಶೋಯಿಬ್ ಅಖ್ತರ್‌ಗೆ ಅವಮಾನ, ಪಿಟಿವಿಗೆ ಪಾಕ್ ಮಾಜಿ ವೇಗಿ ರಾಜೀನಾಮೆ

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರನ್ನು ತವರಿನ ಟಿವಿ ಕಾರ್ಯಕ್ರಮವೊಂದರಲ್ಲಿ ನಿರೂಪಕ ಅವಮಾನಿಸಿ ಸ್ಟುಡಿಯೋದಿಂದ ಹೊರಹೋಗುವಂತೆ ಹೇಳಿ ಅವಮಾನ ಮಾಡಿದ್ದಾರೆ. ನ್ಯೂಜಿಲೆಂಡ್ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯದ ವಿಶ್ಲೇಷಣೆ ವೇಳೆ ಈ ಘಟನೆ ಜರುಗಿದ್ದು, ಆಡುವ ಕಾಲದಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದ 46 ವರ್ಷದ ಶೋಯಿಬ್ ಅಖ್ತರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್, ಪಾಕ್‌ನ ರಶೀದ್ ಲತ್ೀ, ಉಮರ್ ಗುಲ್, ಅಕೀಬ್ ಜಾವೆದ್ ಹಾಗೂ ಪಾಕ್ ಮಹಿಳಾ ತಂಡದ ನಾಯಕಿ ಸನಾ ಮೀರ್ ಹಾಗೂ ಶೋಯಿಬ್ ಅಖ್ತರ್ ಒಳಗೊಂಡ ಕಾರ್ಯಕ್ರಮವನ್ನು ಪಿಟಿವಿಯ ಖ್ಯಾತ ಕ್ರಿಕೆಟ್ ತಜ್ಞ, ಇತಿಹಾಸಕಾರ ನೌಮಾನ್ ನೈಯಾಜ್ ನಡೆಸಿಕೊಡುತ್ತಿದ್ದರು. ಚರ್ಚೆ ವೇಳೆ ಅಖ್ತರ್ ಮಾತಿಗೆ ಸಿಟ್ಟಾದ ನೌಮಾನ್ ನೈಯಾಜ್, ಸ್ಟುಡಿಯೋದರಿಂದ ನೀವು ಹೊರ ನಡೆಯಬಹುದು ಎಂದು ಏಕಾಏಕಿ ಸಿಟ್ಟಿನಿಂದ ಹೇಳಿದ್ದಾರೆ.

ಬಳಿಕ ಮುಜುಗರದಿಂದಲೇ ಸ್ಟುಡಿಯೊದಿಂದ ಹೊರನಡೆದಿರುವ ಅಖ್ತರ್, ದೇಶದ ಎದುರಲ್ಲಿ ನೇರಪ್ರಸಾರದ ವೇಳೆ ನನಗೆ ಅವಮಾನವಾಗಿದೆ. ಇದಕ್ಕಾಗಿ ಪಿಟಿವಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನೀವು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದೀರಾ, ಸ್ಟುಡಿಯೋದಿಂದ ಹೊರ ನಡೆಯಿರಿ ಎಂದು ನಿರೂಪಕರು ಹೇಳಿದರೆಂದು ಅಖ್ತರ್ ಅಸಮಾಧಾನ ಹೊರಹಾಕಿದ್ದಾರೆ. ಪಾಕ್ ಪರ ಅಖ್ತರ್ 46 ಟೆಸ್ಟ್ ಹಾಗೂ 163 ಏಕದಿನ ಪಂದ್ಯಗಳನ್ನಾಡಿದ್ದಾರೆ.