ವಾರಾಣಸಿ: ಲಂಡನ್ನ ಲಾರ್ಡ್ಸ್ ಕ್ರೀಡಾಂಗಣವನ್ನು ಕ್ರಿಕೆಟ್ ಕಾಶಿ ಎನ್ನಲಾಗುತ್ತದೆ. ಆದರೆ ಇದೀಗ ಭಾರತದಲ್ಲೇ 'ಕ್ರಿಕೆಟ್ ಕಾಶಿ' ನಿರ್ಮಾಣವಾಗುತ್ತಿದೆ! ಹೌದು, ಕಾಶಿ ವಿಶ್ವನಾಥನ ಥೀಮ್ನಲ್ಲೇ ಹೊಸ ಕ್ರಿಕೆಟ್ ಕ್ರೀಡಾಂಗಣವೊಂದು ನಿರ್ಮಾಣವಾಗುತ್ತಿದೆ. ತ್ರಿಶೂಲ, ಅರ್ಧಚಂದ್ರ, ಢಮರುಗ, ಬಿಲ್ವಪತ್ರೆಯ ವಿನ್ಯಾಸಗಳನ್ನು ಒಳಗೊಂಡ ಶಿವನ ಥೀಮ್ನಲ್ಲೇ ಈ ಕ್ರೀಡಾಂಗಣದ ನೀಲನೆ ಸಿದ್ಧಪಡಿಸಲಾಗಿದೆ.
ಶಿವನ ತಲೆಯ ಮೇಲಿರುವ ಅರ್ಧಚಂದ್ರಾಕೃತಿಯಲ್ಲೇ ಕ್ರೀಡಾಂಗಣದ ಮೇಲ್ಛಾವಣಿಯ ವಿನ್ಯಾಸವಿರಲಿದೆ. ಫ್ಲಡ್ಲೈಟ್ಗಳನ್ನು ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗುತ್ತದೆ. ಕ್ರೀಡಾಂಗಣದ ಮುಖ್ಯ ಪ್ರವೇಶ ದ್ವಾರದಲ್ಲಿರುವ ಪೆವಿಲಿಯನ್ ಮತ್ತು ವಿಐಪಿ ಲಾಂಜ್ಗಳ ಗುಮ್ಮಟವು ಶಿವನ ಕೈಯಲ್ಲಿರುವ ಢಮರುಗದ ರೀತಿಯಲ್ಲೇ ಇರಲಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್ಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿ ಇರಲಿವೆ.
ಒಟ್ಟಾರೆ 450 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಉತ್ತರ ಪ್ರದೇಶ ಸರ್ಕಾರವು ಕ್ರೀಡಾಂಗಣದ ಭೂಮಿಯ ಸ್ವಾಮ್ಯಕ್ಕಾಗಿ 120 ಕೋಟಿ ರೂ. ವ್ಯಯಿಸಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಬಿಸಿಸಿಐ 330 ಕೋಟಿ ರೂ. ಖರ್ಚು ಮಾಡಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಿಸಿದ ಎಲ್ ಆಂಡ್ ಟಿ ಕಂಪನಿಯೇ ಈ ಕ್ರೀಡಾಂಗಣದ ಕಾಮಗಾರಿಯನ್ನೂ ನಿರ್ವಹಿಸಲಿದೆ. ಒಟ್ಟು 30 ಸಾವಿರ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಒಳಗೊಂಡ ಈ ಕ್ರೀಡಾಂಗಣ ಮುಂದಿನ 2 ವರ್ಷಗಳಲ್ಲಿ ಸಿದ್ಧಗೊಳ್ಳಲಿದೆ.
23ಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 23ರಂದು ಕ್ರೀಡಾಂಗಣದ ಶಿಲಾನ್ಯಾಸ ಮಾಡಲಿದ್ದಾರೆ. ಇದು ಅವರದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರಾಣಸಿ ಸಮೀಪದ ಗಂಜರಿಯಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣವಾಗಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಷಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ದಿಗ್ಗಜರಾದ ಕಪಿಲ್ ದೇವ್, ಸುನೀಲ್ ಗಾವಸ್ಕರ್, ಸಚಿನ್ ತೆಂಡುಲ್ಕರ್, ಸಮಾರಂಭದಲ್ಲಿ ಹಾಜರಿರಲಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಇತರ ಸದಸ್ಯರಾದ ದಿಲೀಪ್ ವೆಂಗ್ಸರ್ಕಾರ್, ರವಿಶಾಸ್ತ್ರಿ, ಮದನ್ ಲಾಲ್ ಜತೆಗೆ ಕನ್ನಡಿಗ ಜಿಆರ್ ವಿಶ್ವನಾಥ್ ಕೂಡ ಉಪಸ್ಥಿತರಿರಲಿದ್ದಾರೆ.