ಕ್ರೀಡೆ

ಶಿವಮೊಗ್ಗ ಲಯನ್ಸ್ ಗೆಲುವಿನ ಓಟ: ಮಯಾಂಕ್ ಬಳಗಕ್ಕೆ ಎರಡನೇ ಸೋಲು

ಗುರುರಾಜ್ ಬಿ.ಎಸ್

ಬೆಂಗಳೂರು: ಆರಂಭಿಕ ರೋಹನ್ ಕದಂ (70 ರನ್, 47 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡ ಎರಡನೇ ಆವೃತ್ತಿ ಮಹಾರಾಜ ಟ್ರೋಪಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್‌ ಎದುರು 36 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಶ್ರೇಯಸ್ ಗೋಪಾಲ್ ಬಳಗ ಸತತ 2ನೇ ಜಯ ಸಾಧಿಸಿದೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಿನದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ ಲಯನ್ಸ್ ತಂಡ ರೋಹನ್ ಕದಂ ಹಾಗೂ ನಿಹಾಲ್ ಉಳ್ಳಾಲ್ (40) ಒದಗಿಸಿದ ಉತ್ತಮ ಆರಂಭದ ನೆರವಿನಿಂದ 5 ವಿಕೆಟ್‌ಗೆ 201 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ರೋಹನ್ ಕದಂ ಹಾಗೂ ನಿಹಾಲ್ ಉಳ್ಳಾಲ್ ಮೊದಲ ವಿಕೆಟ್‌ಗೆ 65 ರನ್‌ಗಳ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಅಭಿನವ್ ಮನೋಹರ್ (31) ಮತ್ತು ಕ್ರಾಂತಿ ಕುಮಾರ್ (25) ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಏರಿಸಿದರು.

ಪ್ರತಿಯಾಗಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಪ್ರಮುಖ ಬ್ಯಾಟರ್‌ಗಳ ವೈಲ್ಯದಿಂದ 8 ವಿಕೆಟ್‌ಗೆ 165 ರನ್ ಪೇರಿಸಲಷ್ಟೇ ಶಕ್ತವಾಯಿತು.ಬೃಹತ್ ಮೊತ್ತದ ಚೇಸಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟ್‌ರ್ಸ್‌ ಖಾತೆ ತೆರಯುವ ಮುನ್ನವೇ ನಾಯಕ ಮಯಾಂಕ್ ಅಗರ್ವಾಲ್ (0) ಹಾಗೂ ಭುವನ್ ರಾಜು ವಿಕೆಟ್ ಕಳೆದುಕೊಂಡಿತು. ನಂತರ ಪವನ್ ದೇಶಪಾಂಡೆ (32) ಹಾಗೂ ಜೆಶ್ವಂತ್ ಆಚಾರ್ಯ (29) ಜೋಡಿ ತುಸು ಚೇತರಿಕೆ ನೀಡಿದರೂ ನಿರಂತರ ವಿಕೆಟ್ ಕೈಚೆಲ್ಲಿದ ಬೆಂಗಳೂರು ತಂಡಕ್ಕೆ ಕೊನೆಯಲ್ಲಿ ಆಶಿಶ್ ಮಹೇಶ್ (30*) ಪ್ರತಿರೋಧ ತೋರಿದರೂ ಸೋಲಿನ ಅಂತರ ತಗ್ಗಿಸಲಷ್ಟೇ ಸಾಧ್ಯವಾಯಿತು.

ಶಿವಮೊಗ್ಗ ಲಯನ್ಸ್ : 5 ವಿಕೆಟ್‌ಗೆ 201 (ರೋಹನ್ ಕದಂ 70, ನಿಹಾಲ್ 40, ರೋಹಿತ್ 11, ಅಭಿನವ್ ಮನೋಹರ್ 31, ಕ್ರಾಂತಿ ಕುಮಾರ್ 25, ಟಿ. ಪ್ರದೀಪ್ 46ಕ್ಕೆ2, ಎಲ್‌ಆರ್ ಕುಮಾರ್ 38ಕ್ಕೆ2).

ಬೆಂಗಳೂರು ಬ್ಲಾಸ್ಟರ್ಸ್‌: 8 ವಿಕೆಟ್‌ಗೆ 165 ( ಮಯಾಂಕ್ 0, ಜೆಶ್ವಂತ್ 29, ಪವನ್ 32, ಶುಭಾಂಗ್ 22, ಆಶಿಶ್ 30*, ಲೋಚನ್ ಅಪ್ಪಣ್ಣ 17, ಶ್ರೇಯಸ್ ಗೋಪಾಲ್ 11ಕ್ಕೆ 1, ವಿ. ಕೌಶಿಕ್ 23ಕ್ಕೆ1, ಅದೋಕ್ಷ 22ಕ್ಕೆ1).

ಪಂದ್ಯ ಶ್ರೇಷ್ಠ: ರೋಹನ್ ಕದಂ.

ನಾಳೆಯ ಪಂದ್ಯಗಳು

ಬೆಂಗಳೂರು ಬ್ಲಾಸ್ಟರ್ಸ್‌-ಹುಬ್ಬಳ್ಳಿ ಟೈಗರ್ಸ್‌

ಆರಂಭ: ಮಧ್ಯಾಹ್ನ 1ಕ್ಕೆ

ಮೈಸೂರು ವಾರಿಯರ್ಸ್‌- ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಸಂಜೆ 5.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.