ಶಿವಮೊಗ್ಗ: ಶಿವಮೊಗ್ಗ ಪದವಿಪೂರ್ವ ಶಿಕ್ಷಣ ಇಲಾಖೆ, ಸೇಂಟ್ ಜೋಸೆಫ್ ಅಕ್ಷರಧಾಮ ಪಿಯು ಕಾಲೇಜು, ರಾಜ್ಯ ಕರಾಟೆ ಸಂಸ್ಥೆಯ ಆಶ್ರಯದಲ್ಲಿ 19 ವರ್ಷದೊಳಗಿನ ಪಿಯು ಕಾಲೇಜುಗಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2022-23ನ್ನು ಅ.10 ಮತ್ತು 11ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಡಿಡಿಪಿಯು ಬಿ.ಕೃಷ್ಣಪ್ಪ ತಿಳಿಸಿದರು.
ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಆತಿಥ್ಯ ವಹಿಸಿ ಬಾಲಕ-ಬಾಲಕಿಯರ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ. ಅ.9ರ ಸಂಜೆ 4ರಿಂದ ರಾತ್ರಿ 9ರವರೆಗೆ ನೇರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 32 ಜಿಲ್ಲೆ( ಶೈಕ್ಷಣಿಕ ಜಿಲ್ಲೆ ಸೇರಿ)ಗಳಿಂದ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ 768 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲಾ ಉಸ್ತುವಾರಿ ಸಚಿವ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಅ.10ರಂದು ಬೆಳಗ್ಗೆ 10.30ಕ್ಕೆ ಪಂದ್ಯಾವಳಿಗೆ ಚಾಲನೆ ನೀಡುವರು. ತೂಕದ ವಿಭಾಗದಂತೆ 11 ಬಾಲಕಿಯರು ಮತ್ತು 13 ಬಾಲಕರು ಪ್ರತಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವರು. ಎಸ್‌ಜಿಎಫ್‌ಐ ನಿಯಮದ ಅನ್ವಯ ಪಂದ್ಯಾವಳಿ ನಡೆಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದವರು ಕ್ರೀಡಾ ಕೋಟಾದಡಿ ಸಿಗುವ ಎಲ್ಲ ಸೌಲಭ್ಯಗಳಿಗೂ ಅರ್ಹರಾಗುವರು ಎಂದರು.
ಅ.10ರಂದು ಬೆಳಗ್ಗೆ 9ಕ್ಕೆ ಮೇರಿ ಇಮ್ಯಾಕುಲೇಟ್ ಶಾಲಾ ಆವರಣದಿಂದ ನೆಹರು ಒಳಾಂಗಣ ಕ್ರೀಡಾಂಗಣದವರೆಗೆ ಕ್ರೀಡಾಪಟುಗಳ ಜಾಥಾ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಎಂದು ಹೇಳಿದರು.