ಶಿವಮೊಗ್ಗ: ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಎರಡು ಮೈದಾನಗಳು ಮಳೆಗಾಲದಲ್ಲಿ ನವುಲೆ ಕೆರೆ ಭರ್ತಿಯಾಗಿ ಹಲವು ದಿನಗಳವರೆಗೆ ನೀರು ನಿಲುಗಡೆ ಆಗುತ್ತಿತ್ತು. ಅದಕ್ಕೆ ಪರಿಹಾರ ಕಂಡುಕೊಂಡಿದ್ದೇವೆ. ಈಗ ಮೈದಾನದಲ್ಲಿ ನೀರು ನಿಲುಗಡೆ ಆದರೂ 24 ಗಂಟೆಯಲ್ಲೇ ಮುಕ್ತಿ ಸಿಗಲಿದೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯ ಮಾಜಿ ಸಂಚಾಲಕ ಡಿ.ಎಸ್.ಅರುಣ್ ಹೇಳಿದರು.
ನವುಲೆ ಕೆರೆ ಬಳಿ ತಿರುವು ಇದ್ದ ರಸ್ತೆಯನ್ನು ನೇರವಾಗಿ ಮಾಡಲಾಗಿತ್ತು. ಈ ವೇಳೆ ಕೆರೆಗೆ ನೀರು ಹೋಗಲು ಅಳವಡಿಸಿದ್ದ ಪೈಪ್, ಮೈದಾನಕ್ಕಿಂತ ಮೇಲಿತ್ತು. ಹಾಗಾಗಿ ನೀರು ಮೈದಾನದಲ್ಲಿ ನಿಲ್ಲುತ್ತಿತ್ತು. ಪೈಪ್ ಅನ್ನು ಸರಿಪಡಿಸಿದ ಬಳಿಕ ಎಷ್ಟೇ ನೀರಿದ್ದರೂ ಒಂದೇ ದಿನದಲ್ಲಿ ಖಾಲಿ ಆಗಲಿದೆ ಎಂದು ಹೇಳಿದರು.
ನವುಲೆ ಕೆರೆ ಅಭಿವೃದ್ಧಿಗೆ ಕೆಎಸ್‌ಸಿಎ ಬದ್ಧವಾಗಿದೆ. ಈಗಾಗಲೇ ಸೂಡಾ ಮತ್ತು ಪಾಲಿಕೆಗೆ ಪತ್ರ ಕೂಡ ಬರೆಯಲಾಗಿದೆ. ಕೆರೆ ಸೌಂದರ್ಯಕರಣಕ್ಕೆ ಆಸಕ್ತಿ ಜತೆಗೆ ಜವಾಬ್ದಾರಿ ಕೂಡ ಇದೆ. ಕೆರೆಯಲ್ಲಿನ ಡಿ-ಸಿಲ್ಟಿಂಗ್‌ಅನ್ನು ಪಾಲಿಕೆ ತೆರವು ಮಾಡಿಸಬೇಕಿದೆ. ಮೂರ್ನಾಲ್ಕು ಕಡೆ ಯುಜಿಡಿ ನೀರು ಬಂದು ಕೆರೆಗೆ ಸೇರುತ್ತಿದ್ದು, ಅದನ್ನು ಸ್ಥಗಿತಗೊಳಿಸಬೇಕು. 200 ಮೀಟರ್ ಡ್ರೈನೇಜ್ ಕೆಲಸ ಆದರೆ ವಾಕಿಂಗ್ ಪಾತ್ ಸೇರಿ ಕೆರೆ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಕೆಎಸ್‌ಸಿಎ ಮೈದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಬೇಕಿದೆ. ಮಳೆಗಾಲದಲ್ಲಿ ಆಟಗಾರರು ಮೂರ್ನಾಲ್ಕು ತಿಂಗಳು ಅಭ್ಯಾಸ ಮಾಡುವುದಕ್ಕೆ ಆಗಲ್ಲ. 365 ದಿನವೂ ಅಭ್ಯಾಸ ನಡೆಸಲು ಅನುಕೂಲ ಆಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 50 ಲಕ್ಷ ರೂ. ಅನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಮಂಜೂರು ಕೂಡ ಮಾಡಲಾಗಿದೆ ಎಂದು ಹೇಳಿದರು.
ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ಸಂಚಾಲಕ ಎಚ್.ಎಸ್.ಸದಾನಂದ, ಮಾಜಿ ಸಂಚಾಲಕ ಡಿ.ಆರ್.ನಾಗರಾಜ್, ಮಾಧ್ಯಮ ಪ್ರಮುಖ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.