ನವದೆಹಲಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ನಾನು 5 ವರ್ಷಗಳ ಅವಧಿಯಲ್ಲಿ ಜತೆಯಾಗಿ 100 ಶತಕ ಸಿಡಿಸಿದ್ದೆವು. ಅದೊಂದು ಅಮೋಘ ಪ್ರಯಾಣವಾಗಿತ್ತು. ಇದಕ್ಕಾಗಿ ನಾನು ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದು ಶನಿವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ತಿಳಿಸಿದ್ದಾರೆ. ಅಂಕಿ-ಅಂಶಗಳ ಪ್ರಕಾರ 2013ರ ಜೂನ್ನಿಂದ 2019ರವರೆಗೆ ಧವನ್ (23), ಕೊಹ್ಲಿ (49) ಮತ್ತು ರೋಹಿತ್ (30) ಒಟ್ಟು 102 ಶತಕ ಸಿಡಿಸಿದ್ದರು.
ಟೆಸ್ಟ್ಗೆ ಭರ್ಜರಿ ಪದಾರ್ಪಣೆ
ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಸ್ಮರಣೀಯವಾಗಿರಲಿಲ್ಲ. ಎರಡೇ ಎಸೆತಗಳಲ್ಲಿ ಡಕೌಟ್ ಆಗಿದ್ದರು. ಆದರೆ 2013ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಮೊಹಾಲಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. ದಿಗ್ಗಜ ಸಚಿನ್ ತೆಂಡುಲ್ಕರ್ರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡಿದ್ದ ಧವನ್, 174 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್ ಸಹಿತ 187 ರನ್ ಸಿಡಿಸಿದ್ದರು. 85 ಎಸೆತಗಳಲ್ಲೇ ಶತಕ ಪೂರೈಸುವ ಮೂಲಕ ಪದಾರ್ಪಣೆಯ ಟೆಸ್ಟ್ನಲ್ಲಿ ಅತಿವೇಗದ ಶತಕ ಸಾಧಕ ಎನಿಸಿದ್ದರು. ಅಲ್ಲದೆ ಪದಾರ್ಪಣೆಯ ಟೆಸ್ಟ್ನಲ್ಲಿ ಭಾರತ ಪರ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.