ಕ್ರೀಡೆ

ಕ್ರಿಕೆಟಿಗ ಶಿಖರ್ ಧವನ್ ದಾಂಪತ್ಯದಲ್ಲಿ ಬಿರುಕು, ಪತ್ನಿ ಆಯೇಷಾಗೆ ವಿಚ್ಛೇದನ

ನವದೆಹಲಿ: ಟೀಮ್ ಇಂಡಿಯಾ ಎಡಗೈ ಆರಂಭಿಕ ಶಿಖರ್ ಧವನ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಪತ್ನಿ ಅಯೇಷಾ ಮುಖರ್ಜಿಗೆ ಶಿಖರ್ ಧವನ್ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ. 2ನೇ ಬಾರಿ ವಿಚ್ಛೇದಿತೆಯಾಗಿರುವ ಕುರಿತು ಆಯೇಷಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಆದರೆ ಶಿಖರ್ ಧವನ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

35 ವರ್ಷದ ಧವನ್ 2012ರಲ್ಲಿ ತಮಗಿಂತ 10 ವರ್ಷ ಹಿರಿಯರಾದ ಆಯೇಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ 2014ರಲ್ಲಿ ಗಂಡು ಮಗು (ಜೋರಾವರ್) ಜನಿಸಿತ್ತು. ಭಾರತ ಮೂಲದ ಆಯೇಷಾ ಮೆಲ್ಬೋರ್ನ್ ನಿವಾಸಿಯಾಗಿದ್ದು, ಧವನ್ ಆಗಾಗ ಆಸೀಸ್‌ಗೆ ಹೋಗಿ ಬರುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರು ಪತ್ನಿಯಿಂದ ಸಂಪೂರ್ಣ ದೂರವಿದ್ದಾರೆ ಎನ್ನಲಾಗಿದೆ.

ಧವನ್‌ಗೆ ಮುನ್ನ ಆಸೀಸ್ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದ ಆಯೇಷಾ, ಆ ದಾಂಪತ್ಯದಿಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಶಿಖರ್ ಧವನ್ ಭಾರತ ಪರ ಇದುವರೆಗೆ 34 ಟೆಸ್ಟ್, 145 ಏಕದಿನ ಮತ್ತು 66 ಟಿ20 ಪಂದ್ಯವಾಡಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಸೀಮಿತ ಓವರ್ ತಂಡವನ್ನು ಮುನ್ನಡೆಸಿದ್ದ ಧವನ್, ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿಯೂ ಕಣಕ್ಕಿಳಿದಿದ್ದಾರೆ.