ಕ್ರೀಡೆ

ಇದನ್ನು ನಾನು ಸಹಿಸಲ್ಲ… ಮ್ಯಾಚ್​ ಫಿಕ್ಸಿಂಗ್ ಪದ ಕೇಳುತ್ತಿದ್ದಂತೆ ಸಿಡಿದೆದ್ದ ಪಾಕ್ ಆಟಗಾರ!

ಲಾಹೋರ್​: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಪಾಕಿಸ್ತಾನ ಕ್ರಿಕಟ್ ತಂಡ, ಬಾಬರ್ ಆಜಂ ನೇತೃತ್ವದಲ್ಲಿ ಮೊದಲ ಹಂತದಲ್ಲೇ ಟೂರ್ನಿಯಿಂದ ಹೊರಗುಳಿಯಿತು. ಸದ್ಯ ಮುಂಬರುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಪಾಕ್​, ಪ್ಯಾರಿಸ್​ ಒಲಿಂಪಿಕ್ಸ್​ನ ಜಾವಲಿನ್ ಎಸೆತದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ​ಗೆದ್ದುಕೊಟ್ಟ ಅರ್ಷದ್​ ನದೀಮ್​ ಸಾಧನೆಯನ್ನು ಮೆಚ್ಚಿ, ಕೊಂಡಾಡಿದರು. ನದೀಮ್​ ಗೆಲುವಿನಿಂದ ತಂಡದ ಆಟಗಾರರಿಗೆ ಏನಾದರೂ ಸಲಹೆ ಸಿಕ್ಕಿದೆಯಾ ಎಂಬ ಪ್ರಶ್ನೆಯ ಬೆನ್ನಲ್ಲೇ ಸುದ್ದಿಗಾರರೊಬ್ಬರು ಫಿಕ್ಸಿಂಗ್​ ಪದ ಹೊರಹಾಕುತ್ತಿದ್ದಂತೆ ಕ್ರಿಕೆಟಿಗ ಶಹಾನ್ ಮಸೂದ್​ ತೀವ್ರ ಸಿಡಿಮಿಡಿಗೊಂಡಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಜಾವಲಿನ್​ ಎಸೆತದಲ್ಲಿ ಅರ್ಷದ್ ನದೀಮ್ ದೇಶಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನು ಉದ್ದೇಶಿಸಿ ನಿಮ್ಮ ತಂಡದ ಆಟಗಾರರಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಪತ್ರಕರ್ತರೊಬ್ಬರು ಮಸೂದ್‌ಗೆ ಪ್ರಶ್ನಿಸಿದರು. ತದನಂತರ ಮ್ಯಾಚ್ ಫಿಕ್ಸಿಂಗ್ ಮತ್ತು ಇತರ ತಪ್ಪುಗಳ ಬದಲಿಗೆ ರಾಷ್ಟ್ರಕ್ಕೆ ಈ ರೀತಿ ಕೀರ್ತಿ ತಂದರೆ ಕ್ರಿಕೆಟಿಗರಿಗೆ ಹೆಚ್ಚು ಬಹುಮಾನ, ಗೌರವ ದೊರಕಬಹುದು ಎಂದು ಹೇಳಿದರು. ಈ ಪ್ರಶ್ನೆಗೆ ಪ್ರಾರಂಭದಲ್ಲಿ ಉತ್ತರಿಸದ ಶಹಾನ್​, "ನಮ್ಮಲ್ಲಿ ಪ್ರತಿಯೊಬ್ಬ ಆಟಗಾರರು ಕೂಡ ದೇಶಕ್ಕೆ ಗೆಲುವು ತಂದುಕೊಡಬೇಕು ಎಂದೇ ಶ್ರಮಿಸುತ್ತಾರೆ. ನಮ್ಮ ತಂಡಕ್ಕೆ ನಾನು ಹೇಳೋದು ಇಷ್ಟೇ. ಹಳೆಯದು ಮುಗಿದು ಹೋದ ಅಧ್ಯಾಯ. ಅದನ್ನು ಅಲ್ಲಿಗೆ ಬಿಟ್ಟು, ಮುಂದಿನ ಗೆಲುವಿಗೆ ಎದುರುನೋಡಿ" ಎಂದು ತಿಳಿಸಿದರು.

ಇಷ್ಟಾದ ಬಳಿಕ ಪತ್ರಕತ್ರರ ಫಿಕ್ಸಿಂಗ್ ಹೇಳಿಕೆಗೆ ಉತ್ತರಿಸಿದ ಶಹಾನ್, "ಈಗಷ್ಟೇ ನೀವು ಮ್ಯಾಚ್​ ಫಿಕ್ಸಿಂಗ್ ಅಂತ ಹೇಳಿದ್ರಿ. ಪಾಕಿಸ್ತಾನಕ್ಕೆ ಪಂದ್ಯಗಳನ್ನು ಗೆಲ್ಲಲು ಆಟಗಾರರು ತಮ್ಮ ಶ್ರಮ ಮೀರಿ ಕೊಡುಗೆ ನೀಡುತ್ತಿರುವುದರಿಂದ ನಾನು ಯಾರನ್ನೂ ಸಹ ಅನುಮಾನಿಸುವುದಿಲ್ಲ. ಪ್ರಸ್ತುತ ಪಾಕಿಸ್ತಾನದ ಆಟಗಾರರ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಿಮ್ಮ ಈ ಪ್ರಶ್ನೆಗೆ ನನ್ನ ಧಿಕ್ಕಾರವಿದೆ. ಇದನ್ನು ನಾನು ಒಪ್ಪುವುದಿಲ್ಲ. ಐಸಿಸಿ ಟಿ20 ವಿಶ್ವಕಪ್ 2024 ಮುಗಿದಿದೆ. ಮುಂದಿನ ಗೆಲುವಿನತ್ತ ನಾವು ಎದುರುನೋಡುತ್ತಿದ್ದೀವಿ ಅಷ್ಟೇ" ಎಂದು ಗರಂ ಆಗಿ ಹೇಳಿದ್ದಾರೆ,(ಏಜೆನ್ಸೀಸ್).