ನವದೆಹಲಿ: ಅನುಭವಿ ವೇಗಿ ಮೊಹಮದ್ ಶಮಿ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಔಪಚಾರಿಕವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (ಎನ್‌ಸಿಎ) ಫಿಟ್ನೆಸ್ ಪ್ರಮಾಣ ಪಡೆಯಬೇಕಿದೆ ಎನ್ನಲಾಗಿದೆ. ಸುಮಾರು ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಮರಳಿರುವ ಶಮಿ ಶೀಘ್ರದಲ್ಲೇ ಆಸೀಸ್‌ಗೆ ಪ್ರಯಾಣಿಸಲಿದ್ದು, ವೀಸಾ ಸಹ ಸಿದ್ಧಪಡಿಸಲಾಗಿದೆ.
ಡಿ.26ರಿಂದ ನಡೆಯಲಿರುವ ಮೆಲ್ಬೋರ್ನ್ ಟೆಸ್ಟ್ ಹಾಗೂ ಜ. 3ರಿಂದ ನಡೆಯಲಿರುವ ಸಿಡ್ನಿ ಟೆಸ್ಟ್‌ನಲ್ಲಿ ಶಮಿ ಭಾರತ ಪರ ಕಣಕ್ಕಿಳಿಯುವ ನಿರೀಕ್ಷೆ ಇದೆ. 2023ರ ಜೂನ್‌ನಲ್ಲಿ ಕೊನೆಯದಾಗಿ ಟೆಸ್ಟ್ ಪಂದ್ಯವನ್ನಾಡಿದ್ದ ಶಮಿ, ಮೊಣಕಾಲಿನ ಗಾಯದಿಂದಾಗಿ ಒಂದು ವರ್ಷದ ವಿರಾಮದ ನಂತರ ದೇಶೀಯ ಟೂರ್ನಿಯಲ್ಲಿ ಯಶಸ್ವಿ ಪುನರಾಗಮನ ಮಾಡಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯು ಟೆಸ್ಟ್ ತಂಡದಲ್ಲಿ ಶಮಿ ಸೇರ್ಪಡೆಗಾಗಿ ಎನ್‌ಸಿಎಯಿಂದ ಇತ್ತೀಚಿನ ಫಿಟ್ನೆಸ್ ಪರೀಕ್ಷೆಯ ವರದಿಗಾಗಿ ಕಾಯುತ್ತಿದೆ. ಎನ್‌ಸಿಎ ಸಂಪೂರ್ಣ ವರದಿ ಬಿಸಿಸಿಐ ಕೈ ಸೇರುವವರೆಗೂ 34 ವರ್ಷದ ಶಮಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯ ನಾಕೌಟ್‌ನಲ್ಲಿ ಬಂಗಾಳ ಪರ ಆಡಲಿದ್ದಾರೆ.
ಹಾಲಿ ಋತವಿನಲ್ಲಿ ಬಂಗಾಳದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿರುವ ಶಮಿ, ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿದ್ದಾರೆ. ಡಿ.9ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ ತಂಡ ಚಂಡೀಗಢ ವಿರುದ್ಧ ಸೆಣಸಲಿದೆ.