ಕ್ರೀಡೆ

3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ

ನವದೆಹಲಿ: ಕೆಲ ವರ್ಷಗಳ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ ಎಂದು ಕೌಟುಂಬಿಕ ಕಲಹಗಳಿಂದ ಬೆಸತ್ತಿರುವ ಭಾರತ ತಂಡದ ವೇಗದ ಬೌಲರ್ ಮೊಹಮದ್ ಶಮಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಎಲ್ಲ ವೇಳೆಯಲ್ಲೂ ಕುಟುಂಬ ಸದಸ್ಯರು ನನ್ನ ಮೇಲೆ ಹೆಚ್ಚು ನಿಗಾ ಇಡುವಂತಾಯಿತು ಎಂದಿದ್ದಾರೆ.

ನಾನು ಉಳಿದುಕೊಂಡಿರುವ ಅಪಾರ್ಟ್ ಮೆಂಟ್​ನ 24ನೇ ಫ್ಲೋರ್​ನಿಂದ ಜಿಗಿದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಭಾವಿಸಿದ್ದರು ಎಂದು ಭಾರತದ ನಿಗದಿತ ಓವರ್​ಗಳ ಉಪನಾಯಕ ರೋಹಿತ್ ಶರ್ಮ ಜತೆ ನಡೆಸಿದ ಇನ್​ಸ್ಟಾಗ್ರಾಂ ಚಿಟ್​ಚಾಟ್ ವೇಳೆ ಶಮಿ ಹೇಳಿದ್ದಾರೆ.

‘ನನ್ನ ಕುಟುಂಬಸ್ಥರು ಪ್ರೋತ್ಸಾಹ ನೀಡದಿದ್ದರೆ ಖಂಡಿತವಾಗಿಯೂ ನಾನು ಕ್ರಿಕೆಟ್ ಕಳೆದುಕೊಳ್ಳುತ್ತಿದ್ದೆ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೆ. ಪ್ರಮುಖವಾಗಿ ಇದಕ್ಕೆ ವೈಯಕ್ತಿಕ ವಿಷಯವೇ ಆಗಿತ್ತು’ ಎಂದು ಮೂರು ಮಾದರಿಯಲ್ಲೂ ಭಾರತ ಪ್ರತಿನಿಧಿಸುತ್ತಿರುವ ಶಮಿ ಹೇಳಿದ್ದಾರೆ.

ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು, ಕ್ರಿಕೆಟ್​ನತ್ತ ಒಲವು ಬೆಳೆಸಿಕೊ ಎಂದು ಕುಟುಂಬ ಸದಸ್ಯರು ಸದಾ ಹೇಳುತ್ತಿರುತ್ತಾರೆ ಎಂದಿದ್ದಾರೆ. 2018ರ ಮಾರ್ಚ್ ಪತ್ನಿ ಹಸಿನ್ ಜಹಾನ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದಡಿ ಕೇಸ್ ದಾಖಲಿಸಿದ್ದರು. ಇದರಿಂದ ಬಿಸಿಸಿಐ ಶಮಿ ಅವರ ಕೇಂದ್ರೀಯ ಗುತ್ತಿಗೆ ಪಟ್ಟಿಗೂ ತಡೆನೀಡಿತ್ತು.