ಕ್ರೀಡೆ

ಟಿ-20 ವಿಶ್ವಕಪ್; ತೆರವಾಗಿರುವ ಬುಮ್ರಾ ಸ್ಥಾನಕ್ಕೆ ಶಮಿ ಆಯ್ಕೆ

ನವ ದೆಹಲಿ: ಟಿ-20 ವಿಶ್ವಕಪ್​ ಪಂದ್ಯ ಆಡಲು ಭಾರತ ತಂಡ ಆಸ್ಟ್ರೇಲಿಯಾ ತಲುಪಿದ್ದು, ಈಗಾಗಲೇ ಅಭ್ಯಾಸ ಪಂದ್ಯವನ್ನೂ ಆಡಿದೆ. ಆದರೆ ತೆರವಾಗಿರುವ ಜಸ್​ಪ್ರೀತ್ ಬುಮ್ರಾ ಸ್ಥಾನದಲ್ಲಿ ಯಾವ ಬೌಲರ್ ಆಡಲಿದ್ದಾರೆ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿತ್ತು. ಹಿರಿಯ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಬಿಸಿಸಿಐ ಮಾತ್ರ ಮೌನವಹಿಸಿತ್ತು.

ಇದೀಗ ಬಿಸಿಸಿಐ ಮೊಹಮ್ಮದ್ ಶಮಿ ಅವರನ್ನು ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನ ಎನ್​ಸಿಎನಲ್ಲಿ ಶಮಿ ಫಿಟ್​​ನೆಸ್​ ಪರೀಕ್ಷೆ ಪಾಸ್ ಆಗಿದ್ದರು. ಹೀಗಾಗಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಟಿ-20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ದೀಪಕ್ ಚಹರ್ ನಡುವೆ ಆಯ್ಕೆಗಾಗಿ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದು, ಶೀಘ್ರದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.