ಮೊಹಾಲಿ: ಅನುಭವಿ ವೇಗಿ ಮೊಹಮದ್ ಶಮಿ (51ಕ್ಕೆ 5) ಮಾರಕ ಬೌಲಿಂಗ್ ದಾಳಿ ಹಾಗೂ ಯುವ ಬ್ಯಾಟರ್‌ಗಳಾದ ಶುಭಮಾನ್ ಗಿಲ್ (74 ರನ್, 63 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಋತುರಾಜ್ ಗಾಯಕ್ವಾಡ್ (71 ರನ್, 77 ಎಸೆತ, 10 ಬೌಂಡರಿ) ಒದಗಿಸಿದ ಭರ್ಜರಿ ಆರಂಭದ ಬಲದಿಂದ ಆತಿಥೇಯ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ. ಇದರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ಬಳಗ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ 116 ಅಂಕ ಕಲೆಹಾಕಿದ ಭಾರತ ಅಗ್ರಸ್ಥಾನಕ್ಕೇರಿದ್ದು, ಏಕಕಾಲದಲ್ಲಿ ಎಲ್ಲ ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ತಂಡ ಎನಿಸಿದೆ.
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಡೇವಿಡ್ ವಾರ್ನರ್ (52 ರನ್, 53 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 35.4 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್‌ಗಳಿಸಿದಾಗ ಮಳೆಯಿಂದಾಗಿ 20 ನಿಮಿಷ ಆಟ ಸ್ಥಗಿತಗೊಂಡಿತು. ನಂತರ ಓವರ್ ಕಡಿತವಿಲ್ಲದೆ ಪಂದ್ಯ ಮುಂದುವರಿದಾಗ ಆಸೀಸ್ ಭರ್ತಿ 50 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಗಿಲ್-ಗಾಯಕ್ವಾಡ್ ಹಾಕಿದ ಭದ್ರ ಅಡಿಪಾಯ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (58* ರನ್, 63 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (50 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಸಮಯೋಚಿತ ಜತೆಯಾಟದ ಬಲದಿಂದ ಭಾರತ 48.4 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.
ಶೈನ್ ಆದ ಶಮಿ: ಮೊಹಮದ್ ಶಮಿ ಮೊದಲ ಓವರ್‌ನಲ್ಲಿ ಮಿಚೆಲ್ ಮಾರ್ಷ್ (0) ವಿಕೆಟ್ ಕಬಳಿಸಿ ಪ್ರವಾಸಿಗರಿಗೆ ಶಾಕ್ ನೀಡಿದರು. ಬಳಿಕ ಜತೆಯಾದ ಅನುಭವಿ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ (41) 2ನೇ ವಿಕೆಟ್‌ಗೆ 94 ರನ್ ಪೇರಿಸಿದರು. ಈ ಜೋಡಿಗೆ 19ನೇ ಓವರ್‌ನಲ್ಲಿ ಜಡೇಜಾ ಬ್ರೇಕ್ ಹಾಕಿದರು. 3ನೇ ವಿಕೆಟ್‌ಗೆ ಜತೆಯಾದ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ (39) ಭಾರತಕ್ಕೆ ಸವಾಲೆನಿಸುವ ಮುನ್ನವೇ 2ನೇ ಸ್ಪೆಲ್ ಆರಂಭಿಸಿದ ಶಮಿ, ಸ್ಮಿತ್ ವಿಕೆಟ್ ಕಬಳಿಸಿದರು. ಲಬುಶೇನ್ ಹಾಗೂ ಕ್ಯಾಮರಾನ್ ಗ್ರೀನ್ (31) ಜೋಡಿಗೆ ಅಶ್ವಿನ್ ಕಡಿವಾಣ ಹಾಕಿದರು. ಗ್ರೀನ್ ರನೌಟ್‌ಗೆ ಬಲಿಯಾದರು. ವಿಕೆಟ್ ಕೀಪರ್-ಬ್ಯಾಟರ್ ಜೋಸ್ ಇಂಗ್ಲೀಸ್ (45) ಹಾಗೂ ಮಾರ್ಕಸ್ ಸ್ಟೋಯಿನಿಸ್ (29) 6ನೇ ವಿಕೆಟ್‌ಗೆ 62 ರನ್ ಪೇರಿಸಿ 250ರ ಗಡಿ ದಾಟಿಸಿದರು. ಮ್ಯಾಥ್ಯೂ ಶಾರ್ಟ್ (2), ಸೀನ್ ಅಬೋಟ್ (2) ವಿಕೆಟ್ ಪಡೆದ ಶಮಿ ಏಕದಿನ ಕ್ರಿಕೆಟ್‌ನಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.
ಉತ್ತಮ ಅಡಿಪಾಯ: ಶುಭಮಾನ್ ಗಿಲ್ ಜತೆ ಸ್ಫರ್ಧಾತ್ಮಕ ಗುರಿ ಬೇಸಿಂಗ್ ಆರಂಭಿಸಿದ ಋತುರಾಜ್ ಗಾಯಕ್ವಾಡ್ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 142 ರನ್ ಬಾರಿಸಿದರು. ತವರಿನ ಅಂಗಣದ ಲಾಭ ಪಪಡೆದ ಗಿಲ್, ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರಿಗೆ ಸಾಥ್ ನೀಡಿದ ಋತುರಾಜ್ ಗಾಯಕ್ವಾಡ್ ಏಷ್ಯಾಡ್‌ಗೆ ತೆರಳುವ ಮುನ್ನ ವಿಶ್ವಾಸ ವೃದ್ಧಿಸಿಕೊಂಡರು. 37 ಎಸೆತಗಳಲ್ಲಿ ಗಿಲ್ ಅರ್ಧಶತಕ ಪೂರೈಸಿ ಹಾಲಿ ವರ್ಷದಲ್ಲಿ ಭರ್ಜರಿ ಾರ್ಮ್ ಮುಂದುರಿಸಿದರು. ಗಾಯಕ್ವಾಡ್ ಚೊಚ್ಚಲ ಅರ್ಧಶತಕ ಬಾರಿಸಿದರು. 9 ರನ್ ಅಂತರದಲ್ಲಿ ಭಾರತ ಮೂರು ವಿಕೆಟ್ ಕಳೆದಕೊಂಡಿತು. ವನ್ ಡೌನ್ ಬ್ಯಾಟರ್ ಶ್ರೇಯಸ್ ಅಯ್ಯರ್ (3) ಇಲ್ಲದ ರನ್ ಕಸಿಯಲು ಯತ್ನಿಸಿ ರನೌಟ್ ಆಗಿ ನಿರಾಸೆ ಮೂಡಿಸಿದರು, ಇದರ ಬೆನ್ನಲ್ಲೇ ಶುಭಮಾನ್ ಸಹ ಪೆವಿಲಿಯನ್ ಸೇರಿದರು.
ದಡ ಸೇರಿಸಿದ ರಾಹುಲ್-ಸೂರ್ಯ: ಶುಭಮಾನ್ ಗಿಲ್-ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್‌ಗೆ 142 ರನ್ ಸೇರಿಸಿ ಭಾರತದ ಚೇಸಿಂಗ್‌ಗೆ ಬಲ ತುಂಬಿದರು. ನಂತರ ಭಾರತ 9 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ಉತ್ತಮ ಲಯದಲ್ಲಿದ್ದ ಇಶಾನ್ ಕಿಶನ್ (18) ಕೂಡ ಔಟಾದರು. ಆಗ ಜತೆಗೂಡಿದ ರಾಹುಲ್ ಮತ್ತು ಸೂರ್ಯಕುಮಾರ್ ಜೋಡಿ ಆಸೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 5ನೇ ವಿಕೆಟ್‌ಗೆ 85 ರನ್ ಪೇರಿಸಿತು. ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸರಣಿಯಲ್ಲಿ ಸತತ 3 ಸೊನ್ನೆ ಸುತ್ತಿ ವೈಲ್ಯ ಕಂಡಿದ್ದ ಸೂರ್ಯ ಅರ್ಧಶತಕ ಸಿಡಿಸಿ ವಿಶ್ವಕಪ್‌ಗೂ ಮುನ್ನ ಾರ್ಮ್‌ಗೆ ಮರಳಿದರು. ಗೆಲುವಿನಿಂದ 12 ರನ್ ದೂರವಿದ್ದಾಗ ಸೂರ್ಯ ವಿಕೆಟ್ ಒಪ್ಪಿಸಿದರು. ಬಳಿಕ ರವೀಂದ್ರ ಜಡೇಜಾ (3*) ಜತೆಗೂಡಿ, ಬೌಂಡರಿ ಮೂಲಕ ಅರ್ಧಶತಕ ಪೂರೈಸಿದ ರಾಹುಲ್, ಸಿಕ್ಸರ್ ಸಿಡಿಸಿ ಗೆಲುವನ್ನು ಸಾರಿದರು.