ಕ್ರೀಡೆ

ಕಾಳಿಪೂಜೆಯಲ್ಲಿ ಪಾಲ್ಗೊಂಡ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆ

ಢಾಕಾ: ಇತ್ತೀಚೆಗೆ ಕೋಲ್ಕತದಲ್ಲಿ ಕಾಳಿಪೂಜೆಯಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್‌ಗೆ ಮೂಲಭೂತವಾದಿಗಳಿಂದ ಜೀವಬೆದರಿಕೆ ಎದುರಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟಿಗ ಕ್ಷಮೆಯಾಚಿಸಿದ್ದಾರೆ.

ಫಿಕ್ಸಿಂಗ್ ಆಮಿಷದ ಬಗ್ಗೆ ಮಾಹಿತಿ ನೀಡದ ಕಾರಣ ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಮುಗಿಸಿ ಇತ್ತೀಚೆಗಷ್ಟೇ ಮರಳಿ ಕ್ರಿಕೆಟ್ ಮೈದಾನಕ್ಕಿಳಿಯಲು ಸಜ್ಜಾಗುತ್ತಿರುವ ಶಕೀಬ್ ಅಲ್ ಹಸನ್, ಕಳೆದ ಗುರುವಾರ ಭಾರತಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ, ಕೋಲ್ಕತದಲ್ಲಿ ಕಾಳಿ ಪೂಜೆಯನ್ನು ಉದ್ಘಾಟಿಸಿದ್ದರು.

33 ವರ್ಷದ ಶಕೀಬ್ ಕಾಳಿ ಮಾತೆಯ ಎದುರು ಪೋಸ್ ನೀಡಿರುವ ಚಿತ್ರಗಳೂ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಫೇಸ್‌ಬುಕ್ ಲೈವ್‌ನಲ್ಲಿ ಜೀವ ಬೆದರಿಕೆಯೊಡ್ಡಿದ್ದ. ಶಕೀಬ್‌ರನ್ನು ಕೊಲ್ಲುವುದಾಗಿ ದೊಡ್ಡ ಕತ್ತಿಯನ್ನೂ ಪ್ರದರ್ಶಿಸಿದ್ದ. ಆತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಆತ ಮತ್ತೊಮ್ಮೆ ಫೇಸ್‌ಬುಕ್‌ಗೆ ಬಂದು ಕ್ಷಮೆಯಾಚಿಸಿದ್ದ. ಬಳಿಕ ಆತ ತಲೆಮರೆಸಿಕೊಂಡಿದ್ದಾನೆ ಎಂದು ಆತನ ಬಂಧನದ ಪ್ರಯತ್ನದಲ್ಲಿರುವ ಪೊಲೀಸರು ತಿಳಿಸಿದ್ದಾರೆ.

ಧರ್ಮನಿಂದೆಯ ಆರೋಪಗಳಿಗೆ ಪ್ರತಿಯಾಗಿ ಶಕೀಬ್ ಮಂಗಳವಾರ ಕ್ಷಮೆಯಾಚಿಸಿದ್ದು, ‘ನಾನೇನಾದರು ತಪ್ಪು ಮಾಡಿದ್ದರೆ ಕ್ಷಮಿಸಿಬಿಡಿ’ ಎಂದಿದ್ದಾರೆ.