ಕ್ರೀಡೆ

ನಿಮ್ಮ ಸ್ನೇಹ ಏನಿದ್ದರೂ ಮೈದಾನದಿಂದ ಹೊರಗಿರಲಿ; ಗಂಭೀರ್​​ ಹೇಳಿಕೆಗೆ ಅಫ್ರಿದಿ ತಿರುಗೇಟು

ನವದೆಹಲಿ: ಕಳೆದ ವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಹೈವೋಲ್ಟೇಜ್​ ಕ್ರಿಕೆಟ್​ ಪಂದ್ಯ ಉಭಯ ದೇಶಗಳ ಮಾಜಿ ಆಟಗಾರರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ನಿಮ್ಮ ಸ್ನೇಹ ಏನಿದ್ದರು ಮೈದಾನದಿಂದ ಹೊರಗಿರಲಿ ಎಂಬ ಗಂಭೀರ್​ ಹೇಳಿಕೆಗೆ ಶಾಹಿದ್​ ಅಫ್ರಿದಿ ತಿರುಗೇಟು ನೀಡಿದ್ದಾರೆ.

ಪಂದ್ಯದ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರು ಮಾತನಾಡಿದ್ದನ್ನು ಖಂಡಿಸಿದ ಗೌತಮ್​ ಗಂಭೀರ್​ ನಿಮ್ಮ ಸ್ನೇಹ ಏನಿದ್ದರೂ ಮೈದಾನದಿಂದ ಹೊರಗಿರಲಿ. ಆಡುವ ವೇಳೆ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದಿದ್ದರು.

ಇತ್ತ ಗಂಭೀರ್​ ಹೇಳಿಕೆಗೆ ತಿರುಗೇಟು ನೀಡಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹಿದ್​ ಅಫ್ರಿದಿ ನಾವು ಕ್ರಿಕೆಟಿಗರು ಉಭಯ ದೇಶಗಳ ರಾಯಭಾರಿಗಳಾಗಿದ್ದೇವೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದೇವೆ. ನಮ್ಮನ್ನೂ ಇಷ್ಟಪಡುವವರು ಎಲ್ಲಾ ಕಡೆ ಇರುತ್ತಾರೆ. ಆದ್ದರಿಂದ ಪ್ರೀತಿ, ಗೌರವದ ಸಂದೇಶವನ್ನು ಕಳುಹಿಸುವುದು ಉತ್ತಮ.

ಹಾಗೆಂದ ಮಾತ್ರಕ್ಕೆ ಮೈದಾನದಲ್ಲಿ ಆಕ್ರಮಣಶೀಲತೆ ತೋರುವುದು ಎಂದರ್ಥವಲ್ಲ. ಅವರಿಗೆ ಮೈದಾನದ ಹೊರಗೂ ಒಂದು ಜೀವನವಿದೆ. ಕ್ರಿಕೆಟಿಗರು ತಮ್ಮ ತಮ್ಮ ದೇಶಗಳ ರಾಯಭಾರಿಗಳು ಸಹ ಆಗಿರುತ್ತಾರೆ. ಆಕ್ರಮಣಶೀಲ ವರ್ತನೆ​ ಅವರ ಆಲೋಚನೆ. ನಾವು ವಿಭಿನ್ನವಾಗಿ ಯೋಚಿಸುತ್ತೇವೆ ಎಂದು ಗೌತಮ್​ ಗಂಭೀರ್​ ಹೇಳಿಕೆಗೆ ಶಾಹಿದ್​ ಅಫ್ರಿದಿ ತಿರುಗೇಟು ನೀಡಿದ್ದಾರೆ.