ಕ್ರೀಡೆ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಸಪ್ತ ಸ್ವರ್ಣ ಸಂಭ್ರಮ; ಧಿನಿಧಿ, ಶ್ರೀಹರಿ ತಲಾ 7 ಬಂಗಾರದ ಸಾಧನೆ

ಡೆಹ್ರಾಡೂನ್​: ಕರ್ನಾಟಕದ ಕ್ರೀಡಾಪಟುಗಳು ಬೆಟ್ಟಗಳ ರಾಜ್ಯ ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಆರನೇ ದಿನವಾದ ಸೋಮವಾರ 7 ಸ್ವರ್ಣ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡ 22 ಚಿನ್ನ, 10 ಬೆಳ್ಳಿ, 10 ಕಂಚಿನ ಸಹಿತ ಒಟ್ಟಾರೆ 42 ಪದಕಗಳೊಂದಿಗೆ ಕೂಟದ ಪದಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದೆ. ಕರ್ನಾಟಕದ ಈಜುಪಟುಗಳು ಮತ್ತೆ 5 ಚಿನ್ನ, 1 ಬೆಳ್ಳಿ, 1 ಕಂಚು ಜಯಿಸುವ ಮೂಲಕ ಕೂಟದಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದ್ದರು. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ರಾಜ್ಯದ ಈಜುತಾರೆಯರಾದ ಶ್ರೀಹರಿ ನಟರಾಜ್​ ಮತ್ತು ಧಿನಿಧಿ ದೇಸಿಂಘು ಮತ್ತೆ 2 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕೂಟದಲ್ಲಿ ಗೆದ್ದ ತಮ್ಮ ಸ್ವರ್ಣ ಪದಕಗಳ ಸಂಖ್ಯೆಯನ್ನು ತಲಾ 7ಕ್ಕೆ ಏರಿಸಿಕೊಂಡಿದ್ದಾರೆ. ಶೂಟಿಂಗ್​ನಲ್ಲಿ ರಾಜ್ಯದ 15 ವರ್ಷದ ಬಾಲಕ ಜೊನಾಥನ್​ ಆಂಥೋನಿ ಚಿನ್ನಗೆ ಗುರಿಯಿಟ್ಟು ಗಮನಸೆಳೆದರು. ಸೈಕ್ಲಿಂಗ್​ನಲ್ಲಿ ರಾಜ್ಯದ ಕೀರ್ತಿ ರಂಗಸ್ವಾಮಿ ಇನ್ನೊಂದು ಸ್ವರ್ಣ ಪದಕ ಗೆದ್ದುಕೊಟ್ಟರು.

ಈಜಿನಲ್ಲಿ ಮತ್ತೆ ಪ್ರಾಬಲ್ಯ: ಪುರುಷರ 50 ಮೀ. ಬ್ಯಾಕ್​ಸ್ಟ್ರೊಕ್​ನಲ್ಲಿ ಕರ್ನಾಟಕ ಚಿನ್ನ, ಬೆಳ್ಳಿ ಪದಕಗಳನ್ನು ಒಲಿಸಿಕೊಂಡಿತು. ಶ್ರೀಹರಿ ನಟರಾಜ್​ 26.9 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನ ಗೆದ್ದರೆ, ಆಕಾಶ್​ ಮಣಿ 26.42 ಸೆಕೆಂಡ್​ಗಳಲ್ಲಿ ಈಜಿ ಬೆಳ್ಳಿ ಗಳಿಸಿದರು. ಮಹಾರಾಷ್ಟ್ರದ ರಿಷಭ್​ ದಾಸ್​ (26.45 ಸೆ) ಕಂಚಿಗೆ ತೃಪ್ತಿಪಟ್ಟರು. ಪುರುಷರ 200 ಮೀ. ಮೆಡ್ಲೆಯಲ್ಲಿ ಸೋನ್​ ಗಂಗೂಲಿ 2 ನಿಮಿಷ, 6.61 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಒಲಿಂಪಿಯನ್​ ಸಾಜನ್​ ಪ್ರಕಾಶ್​ರನ್ನು (2ನಿ, 8.17ಸೆ) ಹಿಂದಿಕ್ಕಿ ಸ್ವರ್ಣ ಪದಕ ಗೆದ್ದುಕೊಂಡರು.

ಮಹಿಳೆಯರ 50 ಮೀ. ಬ್ಯಾಕ್​ಸ್ಟ್ರೊಕ್​ನಲ್ಲಿ ರಾಜ್ಯದ ವಿದಿತಾ ನಯನಾ 31.46 ಸೆಕೆಂಡ್​ಗಳಲ್ಲಿ ಈಜಿ ಚಿನ್ನ ಜಯಿಸಿದರೆ, ರಾಜ್ಯದ ಇನ್ನೋರ್ವ ಈಜುಪಟು ಶಾಲಿನಿ ಆರ್​. ದೀತ್​ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಿಶ್ರ 4/100 ಮೀ. ಫ್ರೀಸ್ಟೆ$ಲ್​ ರಿಲೇ ಸ್ಪರ್ಧೆಯಲ್ಲಿ ಶ್ರೀಹರಿ, ಧಿನಿಧಿ, ಆಕಾಶ್​ ಮಣಿ ಮತ್ತು ನೀನಾ ವೆಂಕಟೇಶ್​ ಒಳಗೊಂಡ ರಾಜ್ಯ ತಂಡ 3 ನಿಮಿಷ, 41.03 ಸೆಕೆಂಡ್​ಗಳಲ್ಲಿ ಈಜಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು. ಮಹಾರಾಷ್ಟ್ರ ಬೆಳ್ಳಿ ಮತ್ತು ತಮಿಳುನಾಡು ಕಂಚು ಜಯಿಸಿತು. ಪುರುಷರ 800 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ ಕರ್ನಾಟಕದ ಅನೀಶ್​ ಎಸ್​. ಗೌಡ 8 ನಿಮಿಷ, 24.39 ನಿಮಿಷಗಳಲ್ಲಿ ಈಜಿ ಕಂಚಿಗೆ ತೃಪ್ತಿಪಟ್ಟರೆ, ದೆಹಲಿಯ ಕುಶಾಗ್ರ ರಾವತ್​ ಚಿನ್ನ ಮತ್ತು ಆರ್ಯನ್​ ನೆಹ್ರಾ ಬೆಳ್ಳಿ ಪದಕ ಗೆದ್ದುಕೊಂಡರು.

ಧಿನಿಧಿ ಕೂಟ ದಾಖಲೆ

ಒಲಿಂಪಿಯನ್​ ಈಜುತಾರೆ ಧಿನಿಧಿ ದೇಸಿಂಘು ಮಹಿಳೆಯರ 400 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 4 ನಿಮಿಷ, 24.60 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಹೊಸ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದು 14 ವರ್ಷದ ಧಿನಿಧಿಗೆ ಕೂಟದಲ್ಲಿ ಒಲಿದ 7ನೇ ಸ್ವರ್ಣ ಪದಕವಾಗಿದೆ. ಇದರೊಂದಿಗೆ ಅವರು ಕೂಟದಲ್ಲಿ ಅತಿಹೆಚ್ಚು ಸ್ವರ್ಣ ಪದಕ ಗೆದ್ದ ಕ್ರೀಡಾಪಟುಗಳಲ್ಲಿ ಕರ್ನಾಟಕದ ಇನ್ನೋರ್ವ ಒಲಿಂಪಿಯನ್​ ಈಜುಪಟು ಶ್ರೀಹರಿ ನಟರಾಜ್​ ಜತೆಗೆ ಸಮಬಲ ಸಾಧಿಸಿದ್ದಾರೆ. 24 ವರ್ಷದ ನಟರಾಜ್​ ಸೋಮವಾರ ಮಿಶ್ರ 4/100 ಮೀ. ಫ್ರೀಸ್ಟೆ$ಲ್​ ರಿಲೇಯಲ್ಲಿ ಧಿನಿಧಿ ಜತೆಗೆ ಚಿನ್ನ ಗೆದ್ದರೆ, 50 ಮೀ. ಬ್ಯಾಕ್​ಸ್ಟ್ರೊಕ್​ನಲ್ಲಿ ತನ್ನ 7ನೇ ಸ್ವರ್ಣ ಪದಕ ಒಲಿಸಿಕೊಂಡರು. ಕರ್ನಾಟಕ ಕೂಟದ ಈಜು ಸ್ಪರ್ಧೆಯಲ್ಲೇ ಇದುವರೆಗೆ 18 ಚಿನ್ನ, 10 ಬೆಳ್ಳಿ, 5 ಕಂಚಿನ ಸಹಿತ 33 ಪದಕಗಳನ್ನು ಗೆದ್ದುಕೊಂಡಿದೆ.