ADELAIDE, AUSTRALIA - DECEMBER 17: Prithvi Shaw of India leaves the field after being dismissed during day one of the First Test match between Australia and India at Adelaide Oval on December 17, 2020 in Adelaide, Australia. (Photo by Philip Brown/Popperfoto/Popperfoto via Getty Images) 
ಕ್ರೀಡೆ

ಪೃಥ್ವಿ ಷಾ ಟೀಮ್​ ಇಂಡಿಯಾಗೆ ಮರಳಬೇಕಾದರೆ ಈ ಷರತ್ತು ಪೂರೈಸಬೇಕಂತೆ!

ನವದೆಹಲಿ: ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ಪ್ರವಾಹವನ್ನೇ ಹರಿಸಿದ್ದ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ ಇತ್ತೀಚೆಗೆ ಐಪಿಎಲ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್​ ಪರ ಉತ್ತಮ ಬ್ಯಾಟಿಂಗ್​ ನಿರ್ವಹಣೆ ತೋರಿದ್ದರು. ಇದರ ಹೊರತಾಗಿಯೂ ಅವರನ್ನು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಮತ್ತು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಪರಿಗಣಿಸಲಾಗಿಲ್ಲ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿರುವ ಆಯ್ಕೆಗಾರರು, ಪೃಥ್ವಿ ಷಾ ಇನ್ನು ಟೀಮ್​ ಇಂಡಿಯಾಗೆ ಮರಳಲು ಷರತ್ತು ಒಂದನ್ನು ಕೂಡ ವಿಧಿಸಿದ್ದಾರೆ.

ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆ ಮಾಡಲಾದ 20 ಆಟಗಾರರ ಭಾರತ ತಂಡದಲ್ಲಿ ಹಾರ್ದಿಕ್​​ ಪಾಂಡ್ಯ, ಕುಲದೀಪ್​ ಯಾದವ್​ ಮತ್ತು ಭುವನೇಶ್ವರ್​ ಕುಮಾರ್​ ಹೆಸರು ಮಿಸ್​ ಆಗಿತ್ತು. ಇದರೊಂದಿಗೆ ಯುವ ಆರಂಭಿಕ ಪೃಥ್ವಿ ಷಾ ಅವಕಾಶ ವಂಚಿತರಾಗಿದ್ದು ಕೂಡ ಕೆಲವರ ಗಮನಸೆಳೆದಿತ್ತು. ಇದಕ್ಕೀಗ ಸೂಕ್ತ ಕಾರಣವೂ ಬಹಿರಂಗಗೊಂಡಿದೆ.

21 ವರ್ಷದ ಪೃಥ್ವಿ ಷಾ ಭಾರತ ತಂಡಕ್ಕೆ ಮರಳಬೇಕಾದರೆ ಫಿಟ್ನೆಸ್​ನತ್ತ ಹೆಚ್ಚಿನ ಗಮನಹರಿಸಬೇಕೆಂದು ಆಯ್ಕೆಗಾರರು ಬಯಸಿದ್ದಾರೆ. ಹೀಗಾಗಿ ಪೃಥ್ವಿ ಷಾ ಕೆಲವು ಕೆಜಿ ತೂಕವನ್ನಾದರೂ ಕರಗಿಸಿಕೊಳ್ಳಬೇಕೆಂದು ಷರತ್ತು ವಿಧಿಸಿದ್ದಾರೆ. ಹೆಚ್ಚಿನ ದೇಹತೂಕದಿಂದಾಗಿ ಮೈದಾನದಲ್ಲಿ ಪೃಥ್ವಿ ಷಾ ಚಲನೆ ನಿಧಾನವಾಗಿದೆ. ಆಸ್ಟ್ರೆಲಿಯಾ ಪ್ರವಾಸದಲ್ಲೂ ಅವರ ಫೀಲ್ಡಿಂಗ್​ ನಿರ್ವಹಣೆ ಬಗ್ಗೆ ದೂರುಗಳು ಬಂದಿದ್ದವು. ಆಸ್ಟ್ರೆಲಿಯಾದಿಂದ ಮರಳಿದ ಬಳಿಕ ಪೃಥ್ವಿ ಷಾ ಬ್ಯಾಟಿಂಗ್​ನಲ್ಲಿನ ತಾಂತ್ರಿಕ ದೋಷದ ಬಗ್ಗೆ ಹೆಚ್ಚಿನ ಗಮನಹರಿಸಿ ಸುಧಾರಣೆ ಕಂಡಿದ್ದರೂ, ಫಿಟ್ನೆಸ್​ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆಯ್ಕೆಗಾರರು ದೂರಿದ್ದಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

ಇನ್ನು ಪೃಥ್ವಿ ಷಾಗೆ ರಿಷಭ್​ ಪಂತ್​ ಮಾದರಿಯಾಗಬೇಕು ಎಂದೂ ಆಯ್ಕೆಗಾರರು ಅಭಿಪ್ರಾಯಪಟ್ಟಿದ್ದಾರೆ. ರಿಷಭ್​ ಪಂತ್​ ಕೂಡ 2018-19ರಲ್ಲಿ ಕೆಟ್ಟ ಫಿಟ್ನೆಸ್​ ಮತ್ತು ಫಾಮ್​ರ್ನಿಂದಾಗಿ ತಂಡದಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದ್ದರು. ಆದರೆ ಕಳೆದ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದಿಂದ ಪಂತ್​ ಭಿನ್ನ ಆಟಗಾರರಾಗಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್​ನಲ್ಲಿ ಭರ್ಜರಿ ಲಯದಲ್ಲಿದ್ದಾರೆ. ಇದರಿಂದಾಗಿ ಅವರು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕರಾಗಿಯೂ ಬಡ್ತಿ ಲಭಿಸಿತ್ತು.

ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ರನ್​ಬರ ಎದುರಿಸಿ ತವರಿನ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಹೊರಬಿದ್ದಿದ್ದ ಪೃಥ್ವಿ ಷಾ ಬಳಿಕ ವಿಜಯ್​ ಹಜಾರೆ ಟ್ರೋಫಿಯ 8 ಪಂದ್ಯಗಳಲ್ಲಿ 827 ರನ್​ ಸಿಡಿಸಿದ್ದರು. ಅಲ್ಲದೆ ಟೂನಿರ್ಯ ಇತಿಹಾಸದಲ್ಲಿ 800ಕ್ಕೂ ಅಧಿಕ ರನ್​ ಸಿಡಿಸಿದ ಮೊದಲಿಗರೆನಿಸಿದ್ದರು. ಬಳಿಕ ಐಪಿಎಲ್​ನಲ್ಲೂ ಡೆಲ್ಲಿ ತಂಡಕ್ಕೆ ಕೆಲ ಪಂದ್ಯಗಳಲ್ಲಿ ಭರ್ಜರಿ ಆರಂಭ ಒದಗಿಸಿ ಗೆಲುವಿನ ರೂವಾರಿ ಎನಿಸಿದ್ದರು. ಆದರೆ ಈ ನಡುವೆ ದೇಹತೂಕ ಕರಗಿಸಿಕೊಳ್ಳಲು ವಿಲರಾಗಿರುವುದು ಅವರ ಟೀಮ್​ ಇಂಡಿಯಾ ಮರುಪ್ರವೇಶಕ್ಕೆ ಅಡ್ಡಿಯಾಗಿದೆ.