ಐಚಿ-ನಗೋಯಾ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದ ಸೀಮಾ ಕಲಿರಾಮ್ನಾ ಏಷ್ಯನ್ ಗೇಮ್ಸ್ನ ಅಥ್ಲೆಟಿಕ್ಸ್ನಲ್ಲಿ ಸೋಮವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು. ಹರಿಯಾಣದ 27 ವರ್ಷದ ಸೀಮಾ 5ನೇ ಯತ್ನದಲ್ಲಿ ಜೀವನಶ್ರೇಷ್ಠ 59.88 ಮೀ. ದೂರ ಎಸೆದರೂ ಪೋಡಿಯಂ ಏರಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಅವರು 3ನೇ ಸ್ಥಾನದಲ್ಲಿದ್ದರು. ಆದರೆ ಬಳಿಕ ಥಾಯ್ಲೆಂಡ್ನ ಸುಬೆನ್ರಟ್ ಇನ್ಸಯೆಂಗ್ 61.43 ಮೀ. ಎಸೆತದೊಂದಿಗೆ 3ನೇ ಸ್ಥಾನಕ್ಕೇರಿದರು. ಚೀನಾದ ಫೆಂಗ್ ಬಿನ್ (63.83 ಮೀ) ಚಿನ್ನ, ಜಿಯಾಂಗ್ ಜಿಚಾವೊ (62.25 ಮೀ) ಬೆಳ್ಳಿ ಜಯಿಸಿದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯರಾದ ಸಾನ್ಯಾ ಯಾದವ್ 49.90 ಮೀ. ಎಸೆತದೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಅವಿನಾಶ್ ಕೈತಪ್ಪಿದ ಪದಕ
ಪುರುಷರ 3 ಸಾವಿರ ಮೀ. ಸ್ಟೀಪಲ್ಚೇಸ್ನಲ್ಲಿ ಭಾರತದ ಅನುಭವಿ ಓಟಗಾರ ಅವಿನಾಶ್ ಸಾಬ್ಲೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು. ಮಹಾರಾಷ್ಟ್ರದ 32 ವರ್ಷದ ಅವಿನಾಶ್ 8 ನಿಮಿಷ, 21.67 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಇದರಿಂದ ಜಪಾನ್ ರೈಯುಜಿ ಮಿಯುರಗಿಂತ (8ನಿ, 17.36ಸೆ) ಕೇವಲ 4.31 ಸೆಕೆಂಡ್ ಹಿನ್ನಡೆಯೊಂದಿಗೆ ಕಂಚಿನ ಪದಕ ತಪ್ಪಿಸಿಕೊಂಡರು. 2 ಬಾರಿಯ ಒಲಿಂಪಿಯನ್ ಅವಿನಾಶ್, 2023ರ ಏಷ್ಯಾಡ್ನಲ್ಲಿ ಇದೇ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ್ದರು.
ರಿಲೇಯಲ್ಲೂ ನಿರಾಸೆ
ಕರ್ನಾಟಕದ ಸ್ನೇಹಾ ಎಸ್.ಎಸ್. ಒಳಗೊಂಡ ಭಾರತ ತಂಡ ಮಹಿಳೆಯರ 4/100 ಮೀ. ರಿಲೇ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿ ಪದಕವಂಚಿತವಾಯಿತು. ಭಾರತ 43.57 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕೇವಲ 0.05 ಸೆಕೆಂಡ್ಗಳಿಂದ ಪದಕ ತಪ್ಪಿಸಿಕೊಂಡಿತು. ಥಾಯ್ಲೆಂಡ್ 43.51 ಸೆಕೆಂಡ್ ಮತ್ತು ಜಪಾನ್ 43.52 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿತು. ಚೀನಾ (42.96ಸೆ) ಚಿನ್ನ ಜಯಿಸಿತು. 4/100 ಮೀ. ಮಿಶ್ರ ರಿಲೇಯಲ್ಲಿ ಭಾರತ 3ನೇ ಸ್ಥಾನಿಯಾಗಿ ಫೈನಲ್ಗೇರಿದ್ದು, ಪದಕ ನಿರೀಕ್ಷೆ ಮೂಡಿಸಿದೆ.