West Indies players : ಟೀಮ್ ಇಂಡಿಯಾ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದಿನಿಂದ ಶುರುವಾಗಿದೆ. ಈ ಪಂದ್ಯದಲ್ಲಿ, ಭಾರತ ತಂಡದ ನಾಯಕ ಶುಭಮಾನ್ ಗಿಲ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಆಟಗಾರರು ತಮ್ಮ ತೋಳುಗಳಲ್ಲಿ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಪ್ರವೇಶಿಸಿದ್ದಾರೆ. ಅದಕ್ಕೆ ಕಾರಣ ಏನೆಂಬುದನ್ನು ನಾವೀಗ ತಿಳಿಯೋಣ.
ಈ ತಿಂಗಳ ಆರಂಭದಲ್ಲಿ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಬರ್ನಾರ್ಡ್ ಜೂಲಿಯನ್ ನಿಧನರಾದರು. ಅವರಿಗೆ ಗೌರವ ಸಲ್ಲಿಸಲು ವೆಸ್ಟ್ ಇಂಡೀಸ್ ತಂಡ ಕಪ್ಪು ಪಟ್ಟಿಗಳನ್ನು ಧರಿಸಿ ಇಂದಿನ ಪಂದ್ಯವನ್ನು ಆಡುತ್ತಿದೆ.
ಬರ್ನಾರ್ಡ್ ಜೂಲಿಯನ್ ಅವರು 1973ರ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅವರು ವೆಸ್ಟ್ ಇಂಡೀಸ್ ಪರ 24 ಟೆಸ್ಟ್ ಮತ್ತು 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ನಲ್ಲಿ 866 ರನ್ ಗಳಿಸಿ 50 ವಿಕೆಟ್ ಕಬಳಿಸಿದರು. ಏಕದಿನ ಪಂದ್ಯದಲ್ಲಿ 86 ರನ್ ಗಳಿಸಿ 18 ವಿಕೆಟ್ ಕಬಳಿಸಿದರು. 1975 ರಲ್ಲಿ ವೆಸ್ಟ್ ಇಂಡೀಸ್ ಮೊದಲ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಬರ್ನಾರ್ಡ್ ಜೂಲಿಯನ್ ಪ್ರಮುಖ ಪಾತ್ರ ವಹಿಸಿದರು.
ಅಂದಹಾಗೆ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಬರ್ನಾರ್ಡ್ ಜೂಲಿಯನ್ ಅವರು 75ನೇ ವಯಸ್ಸಿನಲ್ಲಿ 2025, ಅಕ್ಟೋಬರ್ 4ರಂದು ಟ್ರಿನಿಡಾಡ್‌ನ ಉತ್ತರ ಭಾಗದ ವಲ್ಸೈನ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಕ್ರಿಕೆಟ್ ಜಗತ್ತು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಅವರ ಕೊಡುಗೆಗಳನ್ನು ಸ್ಮರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಂಡೀಸ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಇಂದಿನ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.
ಇನ್ನೂ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ (IND vs WI 2 ನೇ ಟೆಸ್ಟ್)ಕ್ಕೆ ಸಂಬಂಧಿಸಿದಂತೆ, ಮೊದಲ ದಿನದ ಊಟದ ವಿರಾಮದ ವೇಳೆಗೆ ಭಾರತ ಒಂದು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ (40) ಮತ್ತು ಸಾಯಿ ಸುದರ್ಶನ್ (16) ಕ್ರೀಸ್‌ನಲ್ಲಿದ್ದರು. ಇದಕ್ಕೂ ಮೊದಲು, ಆರಂಭಿಕ ಆಟಗಾರ ಕೆಎಲ್ ರಾಹುಲ್ (38) ಅವರನ್ನು ವಾರಿಕ್ ಸ್ಟಂಪ್ ಔಟ್ ಮಾಡಿದರು. ಜೈಸ್ವಾಲ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಡವಾಡಿದರು. (ಏಜೆನ್ಸೀಸ್)