ಕ್ರೀಡೆ

ಬ್ಯಾಡ್ಮಿಂಟನ್‌ನಿಂದ ಬ್ರೇಕ್ ಪಡೆದ ಪ್ರಣಯ್: ಕಾರಣ ಹೀಗಿದೆ…

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಲರಾದ ಭಾರತದ ಅಗ್ರ ಪುರುಷ ಷಟ್ಲರ್ ಎಚ್‌ಎಸ್ ಪ್ರಣಯ್, ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ಅಲ್ಪ ವಿರಾಮ ಪಡೆಯುವುದಾಗಿ ಸೋಮವಾರ ಮಾಹಿತಿ ಹಂಚಿಕೊಂಡಿದ್ದಾರೆ. ಚಿಕೂನ್‌ಗುನ್ಯಾ ಜ್ವರದ ಬಳಿಕ ಸಂಪೂರ್ಣ ಫಿಟ್ನೆಸ್ ಪಡೆಯಲು ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಒಂದು ವಾರ ಬಾಕಿಯಿದ್ದಾಗ ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಗೆ ತುತ್ತಾಗಿದ್ದ 32 ವರ್ಷದ ಪ್ರಣಯ್, ದೇಹದ ಶೇ.100 ಫಿಟ್ ಇಲ್ಲದೆ ಕಣಕ್ಕಿಳಿದಿದ್ದರು. ಒಲಿಂಪಿಕ್ಸ್‌ನಲ್ಲಿ ಇದು ಪ್ರಣಯ ಅವರ ಕಾಲಿನ ಕೀಲುಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡಿತ್ತು ಎನ್ನಲಾಗಿದೆ.

ನನ್ನ ತಂಡದೊಂದಿಗೆ ಚರ್ಚಿಸಿದ ಬಳಿಕ ಮುನ್ನೆಚ್ಚರಿಗೆಯಾಗಿ ಚೇತರಿಕೆಯತ್ತ ಗಮನಹರಿಸಲು ಮುಂಬರುವ ಕೆಲವು ಟೂರ್ನಿಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಸವಾಲಿನ ಸಮಯದಲ್ಲಿ ನಿಮ್ಮಬೆಂಬಲಕ್ಕಾಗಿ ಧನ್ಯವಾದಗಳು. ನಾನು ಮತ್ತೆ ಬಲಶಾಲಿಯಾಗಿ ಮರಳುತ್ತೇನೆ ಎಂದು ಪ್ರಣಯ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಎಷ್ಟು ಸಮಯ ವಿರಾಮ ಪಡೆಯಲಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ. 2023ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ಬಳಿಕ ಪ್ರಣಯ್ ದೀರ್ಘಕಾಲದ ಹೊಟ್ಟೆಯ ಅಸ್ವಸ್ಥತೆ ಮತ್ತು ಬೆನ್ನು ನೋವು ಸಮಸ್ಯೆ ಎದುರಿಸಿದ್ದರು.