ಕ್ರೀಡೆ

ಸಾತ್ವಿಕ್​-ಚಿರಾಗ್​ಗೆ ಪದಕ ಖಚಿತ: ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ

ಪ್ಯಾರಿಸ್​: ಗಾಯದ ಸಮಸ್ಯೆಗಳ ಬಳಿಕ ಪುಟಿದೆದ್ದಿರುವ ಮಾಜಿ ವಿಶ್ವ ನಂ. 1 ಜೋಡಿಯಾಗಿರುವ ಭಾರತದ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಕರ್ನಾಟಕ ಮೂಲದ ಚಿರಾಗ್​ ಶೆಟ್ಟಿ ಜೋಡಿ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಭಾರತ ಕೂಟದಲ್ಲಿ 2011ರ ನಂತರ ಸತತವಾಗಿ ಪದಕ ಗೆದ್ದುಕೊಂಡು ಬಂದಿರುವ ದಾಖಲೆಯನ್ನೂ ಕಾಯ್ದುಕೊಂಡಿದೆ.

ವಿಶ್ವ ನಂ. 9 ಸಾತ್ವಿಕ್​&ಚಿರಾಗ್​ ಜೋಡಿ ಪುರುಷರ ಡಬಲ್ಸ್​ ವಿಭಾಗದಲ್ಲಿ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮಲೇಷ್ಯಾದ ಆರೋನ್​ ಚಿಯಾ ಮತ್ತು ಸೋಹ್​ ವೂಯಿ ಯಿಕ್​ ಜೋಡಿಯನ್ನು 21-12, 21-19 ನೇರಗೇಮ್​ಗಳಿಂದ 43 ನಿಮಿಷಗಳಲ್ಲಿ ಮಣಿಸಿತು. 2 ಬಾರಿಯ ಒಲಿಂಪಿಕ್ಸ್​ ಪದಕ ವಿಜೇತ ಮಲೇಷ್ಯಾ ಜೋಡಿಗೆ ಸೋಲುಣಿಸುವ ಮೂಲಕ ಸಾತ್ವಿಕ್​-ಚಿರಾಗ್​ 2ನೇ ಬಾರಿ ವಿಶ್ವ ಚಾಂಪಿಯನ್​ಷಿಪ್​ ಪದಕ ಒಲಿಸಿಕೊಂಡರು. ಅವರು ಈ ಮುನ್ನ 2002ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಬಾರಿ ಪದಕದ ಬಣ್ಣ ಬದಲಾಯಿಸಿಕೊಳ್ಳುವ ಅವಕಾಶವೂ ಸಾತ್ವಿಕ್​-ಚಿರಾಗ್​ ಜೋಡಿಯ ಮುಂದಿದೆ.

2011ರಲ್ಲಿ ಜ್ವಾಲಾ ಗುಟ್ಟಾ ಮತ್ತು ಕನ್ನಡತಿ ಅಶ್ವಿನಿ ಪೊನ್ನಪ್ಪ ಮಹಿಳಾ ಡಬಲ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ನಂತರ ಭಾರತ ವಿಶ್ವ ಚಾಂಪಿಯನ್​ಷಿಪ್​ನ ಪ್ರತಿ ಆವೃತ್ತಿಯಲ್ಲೂ ಕನಿಷ್ಠ ಒಂದಾದರೂ ಪದಕ ಗೆಲ್ಲುತ್ತ ಬಂದಿದೆ. ಏಷ್ಯನ್​ ಗೇಮ್ಸ್​ ಚಾಂಪಿಯನ್​ಗಳಾದ ಸಾತ್ವಿಕ್​-ಚಿರಾಗ್​ಗೆ ಸೆಮಿಫೈನಲ್​ನಲ್ಲಿ ವಿಶ್ವ ನಂ. 11 ಚೀನಾದ ಚೆನ್​ ಬೊ ಯಾಂಗ್​&ಲಿಯು ಯಿ ಜೋಡಿಯ ಸವಾಲು ಎದುರಾಗಲಿದೆ. ಸಾತ್ವಿಕ್​-ಚಿರಾಗ್​ ಈಗ ಕೂಟದಲ್ಲಿ ಭಾರತದ ಕೊನೇ ಆಶಾಕಿರಣವಾಗಿದ್ದಾರೆ.

ಸೇಡು ತೀರಿಸಿದ ಸತ್​ಚಿ

"ಸತ್​ಚಿ' ಖ್ಯಾತಿಯ ಸಾತ್ವಿಕ್​&ಚಿರಾಗ್​ ಜೋಡಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಕ್ವಾರ್ಟರ್​ಫೈನಲ್​ ಸೋಲಿಗೆ ಸರಿಸುಮಾರು ಒಂದು ವರ್ಷದ ವಿರುದ್ಧ ಅದೇ ಸ್ಥಳದಲ್ಲಿ, ಅದೇ ಹಂತದಲ್ಲಿ ಮತ್ತು ಅದೇ ಜೋಡಿಯ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿರುವುದು ವಿಶೇಷವಾಗಿದೆ. "ಇದು ಒಲಿಂಪಿಕ್ಸ್​ನ ರೀಮ್ಯಾಚ್​ ಆಗಿತ್ತು. ಕೊನೆಗೂ ನಾವು ಪುಟಿದೆದ್ದಿದ್ದೇವೆ. ವರ್ಷದ ಹಿಂದೆ ಸೋಲು ಕಂಡಿದ್ದ ಅದೇ ಕೋರ್ಟ್​, ಅದೇ ಅರೇನಾದಲ್ಲಿ ಗೆದ್ದಿದ್ದೇವೆ. ಅವರ ವಿರುದ್ಧ ಆಡುವುದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಇದೀಗ ದೊಡ್ಡ ಟೂರ್ನಿಯೊಂದರಲ್ಲಿ ಅವರ ವಿರುದ್ಧ ಗೆದ್ದಿರುವುದು ಹೆಚ್ಚಿನ ಖುಷಿ ತಂದಿದೆ' ಎಂದು ಉಡುಪಿ ಮೂಲದ ಚಿರಾಗ್​ ಹೇಳಿದ್ದಾರೆ. ವಿಶ್ವ ನಂ. 2 ಚಿಯಾ&ಸೋಹ್​ ಜೋಡಿಯ ವಿರುದ್ಧ ಹಾಲಿ ವರ್ಷ ಸಿಂಗಾಪುರ ಮತ್ತು ಚೀನಾ ಓಪನ್​ನಲ್ಲೂ "ಸತ್​ಚಿ' ಸೋಲು ಕಂಡಿದ್ದರು.

15: ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಭಾರತಕ್ಕೆ ಒಲಿದ 15ನೇ ಪದಕ ಇದಾಗಿದೆ. ಸಾತ್ವಿಕ್​-ಚಿರಾಗ್​ ವಿಶ್ವ ಬ್ಯಾಡ್ಮಿಂಟನ್​ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ 3ನೇ ಭಾರತೀಯ ಸಾಧಕರಾಗಿದ್ದಾರೆ. ಪಿವಿ ಸಿಂಧು 5 ಪದಕ ಗೆದ್ದಿರುವುದು ದಾಖಲೆ. ಸೈನಾ ನೆಹ್ವಾಲ್​ 2 ಪದಕ ಗೆದ್ದ ಮತ್ತೋರ್ವ ಭಾರತೀಯ ಸಾಧಕಿ.