ಕ್ರೀಡೆ

ಸಾತ್ವಿಕ್-ಚಿರಾಗ್, ಸಿಂಧು ಪದಕದ ಕನಸು ಭಗ್ನ: ಲಕ್ಷ್ಯ ಸೇನ್ ಭರವಸೆ!

ಪ್ಯಾರಿಸ್: ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತಕ್ಕೆ ಗುರುವಾರ ಆಘಾತ ಎದುರಾಗಿದೆ. ಪುರುಷರ ಡಬಲ್ಸ್‌ನಲ್ಲಿ ಪದಕ ಭರವಸೆ ಎನಿಸಿದ್ದ ವಿಶ್ವ ನಂ.3 ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್‌ೈನಲ್‌ನಲ್ಲಿ ಪರಾಭವಗೊಂಡಿದೆ. ಇದರೊಂದಿಗೆ ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನಗೊಂಡಿದೆ. ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕ್ವಾರ್ಟರ್‌ಫೈನಲ್‌ಗೇರಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪುರುಷರ ಡಬಲ್ಸ್‌ನ್‌ಲ್ಲಿ ಸಾತ್ವಿಕ್-ಚಿರಾಗ್ 21-13, 14-21, 16-21ರಿಂದ ಮಲೇಷ್ಯಾದ ಆರೋನ್ ಚಿಹಾ ಹಾಗೂ ಸೋ ವೊಯಿ ಯಿಕ್ ಎದುರು ಮೂರು ಗೇಮ್‌ಗಳ ಹೋರಾಟದಲ್ಲಿ ನಿರಾಸೆ ಅನುಭವಿಸಿದರು. ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಸಾತ್ವಿಕ್-ಚಿರಾಗ್ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿ ಆರಂಭ ಮುನ್ನಡೆ ಸಾಧಿಸಿತು. ನಂತರ ಎರಡು ಗೇಮ್‌ಗಳಲ್ಲಿ 2022ರ ವಿಶ್ವ ಚಾಂಪಿಯನ್ ಜೋಡಿ ಎದುರು ಹಿನ್ನಡೆ ಕಂಡಿತು. ಟೋಕಿಯೊ ಗೇಮ್ಸ್ ಕಂಚು ವಿಜೇತ ಆರೋನ್- ವೊಯಿ ಯಿಕ್ ಜೋಡಿ ಸತತ 2ನೇ ಒಲಿಂಪಿಕ್ಸ್ ಸೆಮಿೈನಲ್‌ಗೇರಿತು.

ಹಿಂದಿನ ಮೂರು ಮುಖಾಮುಖಿಗಳಲ್ಲಿ ಮಲೇಷ್ಯಾ ಜೋಡಿಯನ್ನು ಮಣಿಸಿದ ಸಾತ್ವಿಕ್-ಚಿರಾಗ್ ಜಾಗತಿಕ ಕೂಟದಲ್ಲಿ ಎಡವಿತು. ಮಾಜಿ ವಿಶ್ವ.1 ಸಾತ್ವಿಕ್-ಚಿರಾಗ್ ಜೋಡಿ ಆರಂಭಿಕ ಗೇಮ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಮಲೇಷ್ಯಾ ಜೋಡಿಗೆ ಸವಾಲೆಸೆದರು. ಬಳಿಕ ಕಾರ್ಯತಂತ್ರ ಬದಲಾಯಿಸಿದ ಆರೋನ್- ವೊಯಿ ಹಿಕ್ ಜೋಡಿ ಎದುರು ರಕ್ಷಣಾತ್ಮಕ ಆಟವಾಡುವಲ್ಲಿ ಸಾತ್ವಿಕ್-ಚಿರಾಗ್ ಎಡವಿದ್ದು ದುಬಾರಿಯಾಗಿ ಪರಿಣಮಿಸಿತು. 2020ರ ಒಲಿಂಪಿಕ್ಸ್‌ನಲ್ಲಿಯೂ ಸಾತ್ವಿಕ್-ಚಿರಾಗ್ ನಾಕೌಟ್‌ನಲ್ಲಿ ಸೋಲು ಅನುಭವಿಸಿದ್ದರು.

ಪದಕದತ್ತ ಲಕ್ಷ್ಯ: ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್ ಸುಲಭ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೇರಿದ್ದಾರೆ. ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯಸೇನ್ 21-12, 21-6 ನೇರ ಗೇಮ್‌ಗಳಿಂದ ದೇಶ ಬಾಂಧವ ಎಚ್‌ಎಸ್ ಪ್ರಣಯ್ ಅವರನ್ನು ಮಣಿಸಿದರು. ಅನಾರೋಗ್ಯದಿಂದ ಬಳಲುತ್ತಿರುವ ವಿಶ್ವ ನಂ.13 ಪ್ರಣಯ್ ಕನಿಷ್ಠ ಪೈಪೋಟಿ ನೀಡುವಲ್ಲಿ ವಿಲರಾದರು. 39 ನಿಮಿಷದಲ್ಲಿ ಗೆಲುವು ಒಲಿಸಿಕೊಂಡ ಲಕ್ಷ್ಯಸೇನ್ ಮುಂದಿನ ಸುತ್ತಿನಲ್ಲಿ 12ನೇ ಶ್ರೇಯಾಂಕಿತ ಚೀನಾದ ಚೌ ಟಿನ್ ಚೆನ್ ಸವಾಲು ಎದುರಿಸಲಿದ್ದಾರೆ. ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಲಕ್ಷ್ಯ ಸೇನ್ ಪುರುಷರ ವಿಭಾಗದಲ್ಲಿ ಏಕೈಕ ಪದಕ ಭರವಸೆ ಎನಿಸಿದ್ದಾರೆ.

ಸಿಂಧು ಸೋಲು: ರಿಯೋದಲ್ಲಿ ಬೆಳ್ಳಿ, ಟೋಕಿಯೊದಲ್ಲಿ ಕಂಚು ಗೆದ್ದ ಬಳಿಕ ಪ್ಯಾರಿಸ್‌ನಲ್ಲಿ ಚಿನ್ನ ಗೆಲ್ಲುವ ಕನಸು ಕಂಡಿದ್ದ ಪಿವಿ ಸಿಂಧು, ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ನಿರಾಸೆ ಕಂಡಿದ್ದಾರೆ. ಇದರೊಂದಿಗೆ ಸತತ 3ನೇ ಒಲಿಂಪಿಕ್ಸ್ ಪದಕದ ಆಸೆ ಕೈಚೆಲ್ಲಿದ್ದಾರೆ. 10ನೇ ಶ್ರೇಯಾಂಕಿತೆ ಸಿಂಧು 19-21, 14-21 ನೇರ ಗೇಮ್‌ಗಳಿಂದ 6ನೇ ಶ್ರೇಯಾಂಕಿತೆ ಚೀನಾದ ಹೀ ಬಿಂಗ್ ಜಿಯಾವೊ ಎದುರು ಪರಾಭವಗೊಂಡರು. ಟೋಕಿಯೊ ಗೇಮ್ಸ್‌ನಲ್ಲಿ ಹೀ ಬಿಂಗ್ ಜಿಯಾವೊ ಅವರನ್ನು ಮಣಿಸಿ ಸಿಂಧು ಕಂಚು ಜಯಿಸಿದ್ದರು. ಮೊದಲ ಗೇಮ್‌ನಲ್ಲಿ ನಿಕಟ ಪೈಪೋಟಿ ನೀಡಿದ ಸಿಂಧು, ಎರಡನೇ ಗೇಮ್‌ನಲ್ಲಿ ಚೀನಾ ಆಟಗಾರ್ತಿಯ ಪ್ರಬಲ ಹೊಡೆತಗಳ ಎದುರು ಮಂಕಾದರು.