ಪ್ಯಾರಿಸ್: ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.3 ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್‌ಫೈನಲ್ ಪ್ರವೇಶ ಖಾತ್ರಿಪಡಿಸಿಕೊಂಡಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎನಿಸಿದೆ. ಸಿ ಗುಂಪಿನ ಅಗ್ರಸ್ಥಾನಕ್ಕಾಗಿ ಇಂಡೋನೇಷ್ಯಾದ ಜರ್ ಅಲ್ಫೀಯನ್-ಮುಹಮದ್ ರಿಯಾನ್ ಅರ್ಡಿನಾಟೋ ವಿರುದ್ಧ ಕಣಕ್ಕಿಳಿಯಲಿದೆ.
ಆದರೆ ಸೋಮವಾರ ನಿಗದಿಯಾಗಿದ್ದ ಜರ್ಮನಿಯ ಲ್ಯಾಮ್ಸ್‌ಫಸ್ -ಮಾರ್ವಿನ್ ಸೀಡೆಲ್ ವಿರುದ್ಧದ ಪಂದ್ಯ ರದ್ದುಗೊಂಡಿದ್ದು, ಲ್ಯಾಮ್ಸ್‌ಫಸ್ ಮೊಣಕಾಲಿನ ಗಾಯದ ಸಮಸ್ಯೆಯಿಂದ ಕೂಟದಿಂದ ಹಿಂದೆಸರಿದಿದ್ದು ಕಾರಣ. ಇದರೊಂದಿಗೆ ಗುಂಪಿನಲ್ಲಿ ಮೂರು ಜೋಡಿ ಮಾತ್ರ ಉಳಿದುಕೊಂಡಿದ್ದು, ಜರ್ಮನಿಯ ಜೋಡಿ ವಿರುದ್ಧ ಜರ್ ಅಲ್ಫೀಯನ್-ಮುಹಮದ್ ರಿಯಾನ್ ಅರ್ಡಿನಾಟೋ ಅವರ ಗೆಲುವನ್ನು ಕೈ ಬಿಡಲಾಗಿದೆ.
ಜರ್ ಅಲ್ಫೀಯನ್-ಮುಹಮದ್ ರಿಯಾನ್ ಜೋಡಿ ಎದುರು ಫ್ರಾನ್ಸ್ ಲ್ಯೂಕಾಸ್ ಕಾರ್ವಿ- ರೊನಾನ್ ಲ್ಯಾಬರ್ ಸೋಲು, ಭಾರತೀಯ ಜೋಡಿಯ ನಾಕೌಟ್ ಸ್ಥಾನ ನೀಡಿತು. ಸಾತ್ವಿಕ್-ಚಿರಾಗ್ ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ ಜೋಡಿ ಎದುರು ಗೆಲುವು ದಾಖಲಿಸಿತ್ತು. ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ.