ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟ ಇಂದು ಕೂಡ ಮುಂದುವರೆದಿದ್ದು, ಮೊನ್ನೆಯಷ್ಟೇ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್, ಪಂದ್ಯ ಆರಂಭಕ್ಕೂ ಮುನ್ನ ದೇಹ ತೂಕದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿದ್ದಾರೆ ಎಂಬುದರ ಮೇರೆಗೆ ಅವರನ್ನು ಅಂತಿಮ ಸುತ್ತಿನಿಂದ ಐಒಸಿ ಅನರ್ಹಗೊಳಿಸಿತು. ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಕಾರಣಕ್ಕೆ ಫೈನಲ್ ಪಂದ್ಯದಿಂದ ಅನರ್ಹಗೊಳಿಸಿದರು ಎಂಬುದನ್ನು ಅರಗಿಸಿಕೊಳ್ಳಲಾಗದ ಫೋಗಟ್, ಇಂತಹ ಸೋಲನ್ನು ಹೇಗೆ ಒಪ್ಪಿಕೊಳ್ಳುವುದು ಎಂದು ಕಣ್ಣೀರಿಟ್ಟರು. ತೂಕ ಇಳಿಸಲು ರಾತ್ರಿಯಿಡೀ ಹಲವು ರೀತಿಯಲ್ಲಿ ಮಾಡಿದ ಪ್ರಯತ್ನಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ ಕಾರಣ, ವಿನೇಶ್ ಆಸ್ಪತ್ರೆಗೆ ದಾಖಲಾಗಿದ್ದರು.
ತನ್ನ ದೇಶಕ್ಕೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಡಬೇಕು ಎಂಬ ಕನಸು ಕಂಡಿದ್ದ ವಿನೇಶ್ ಪೋಗಟ್ಗೆ ಈ ಸೋಲು ಅನ್ಯಾಯ ಎಂದೇ ಹೇಳಬಹುದು. 50 ಕೆಜಿ ತೂಕದ ಕುಸ್ತಿ ಫೈನಲ್ ಪಂದ್ಯಕ್ಕೆ ವಿನೇಶ್ ಅನರ್ಹರಾಗಿದ್ದಾರೆ ಎಂಬ ಸುದ್ದಿ ಒಲಿಂಪಿಕ್ ಅಸೋಸಿಯೇಷನ್ನಿಂದ ಪ್ರಕಟವಾಗುತ್ತಿದ್ದಂತೆ ವ್ಯಾಪಕ ಆಕ್ರೋಶ, ಅಸಮಾಧಾನ ವ್ಯಕ್ತವಾಯಿತು. ಇದು ಅನ್ಯಾಯ! 100 ಗ್ರಾಂ ಇಳಿಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕಿತ್ತು. ಇದನ್ನು ಏಕೆ ಯಾರು ಪ್ರಶ್ನಿಸಲಿಲ್ಲ ಎಂದು ಜಾಲತಾಣಗಳಲ್ಲಿ ಫೋಗಟ್ ಪರ ಧ್ವನಿ ಎತ್ತಿದ್ದರು. ಇದೀಗ ಅದರಂತೆಯೇ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್ ಪೋಗಟ್, ಕೋರ್ಟ್ ಆಫ್ ಅರ್ಬಿಟ್ರೇಶನ್ ಫಾರ್ ಸ್ಫೋರ್ಟ್ಸ್ (ಸಿಎಎಸ್) ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇನ್ನು ಫೈನಲ್ನಲ್ಲಿ ವಿನೇಶ್ ಎದುರಾಳಿಯಾಗಿದ್ದ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್, ಮಹಿಳೆಯರ ಫೈನಲ್ ಕುಸ್ತಿ ಪಂದ್ಯದಲ್ಲಿ ಫೋಗಟ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿದ್ದ ಗುಜ್ಮನ್ ಲೋಪೆಜ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ನಾಲ್ಕನೇ ಯುಎಸ್ ಮಹಿಳೆಯಾಗಿ ಸಾರಾ ಹೊರಹೊಮ್ಮಿದ್ದಾರೆ. ಐತಿಹಾಸಿಕ ದಾಖಲೆ ಬರೆದ ಹಿಲ್ಡೆಬ್ರಾಂಡ್ ಕಡೆಗೂ ವಿನೇಶ್ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಪ್ರಾರಂಭದಲ್ಲಿ ಈ ಸುದ್ದಿ ತಿಳಿದಾಗ ನನಗೆ ಭಾರೀ ಅಚ್ಚರಿ ಉಂಟಾಯಿತು. ಎದುರಾಳಿ ಇಲ್ಲದೇ ನಾನು ಚಿನ್ನದ ಪದಕ ಗೆದ್ದೆ ಎಂದೇ ಭಾವಿಸಿದ್ದೇ ಆದ್ರೆ, ಅದು ಅಷ್ಟು ಸುಲಭದ ಮಾತಾಗಿರಲಿಲ್ಲ" ಎಂದರು.
"ಅವರು ಅನರ್ಹ ಎಂದು ಘೋಷಣೆಯಾಗುತ್ತಿದ್ದಂತೆ ನಮ್ಮಲ್ಲಿ ಸಂಭ್ರಮ ಜೋರಾಗಿತ್ತು. ಆದ್ರೆ, ಅದಾಗಿ ಒಂದು ಗಂಟೆಯ ಬಳಿಕ ಎಲ್ಲವೂ ತಲೆಕೆಳಗಾಯಿತು. ಪಂದ್ಯವು ರಿಸೆಟ್ ಆಯಿತು. ನಾನು ಚಿನ್ನ ಗೆದ್ದಿರಬಹುದು. ಆದರೆ, ವಿನೇಶ್ ಅವರ ಸೋಲಿಗೆ ನನ್ನ ಮನ ಮಿಡಿಯುತ್ತಿದೆ. ನಾನು ಕೂಡ ಅದೇ ಪರಿಸ್ಥಿತಿಯನ್ನು ಅನುಭವಿಸಿದೆ. ಪಂದ್ಯಕ್ಕೂ ಮುನ್ನ ದೇಹದ ತೂಕ ಇಳಿಸಲು ನಾನಾ ಕಸರತ್ತು ಮಾಡಿದೆ. ಫೋಗಟ್ ಅನುಭವಿಸಿದ ಸ್ಥಿತಿ ನನಗೆ ಅರ್ಥವಾಗುತ್ತದೆ. ಅವರು ಒಂದೊಳ್ಳೆ ವ್ಯಕ್ತಿ, ಅದ್ಭುತ ಕುಸ್ತಿಪಟು ಎಂಬುದರಲ್ಲಿ ಅನುಮಾನವಿಲ್ಲ" ಎಂದು ಎಂದಿದ್ದಾರೆ.