ನವದೆಹಲಿ: ಡೆಂಘೆ ಜ್ವರದಿಂದ ಬಳಲಿದ ಕಾರಣ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಎರಡು ಪಂದ್ಯಗಳಿಗೆ ಅಲಭ್ಯರಾದ ಶುಭಮನ್ ಗಿಲ್ ಅ.14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಮರಳಿದರು. ಪಾಕ್ ವಿರುದ್ಧ ಫೇಲ್ ಆದ ಗಿಲ್ ನಿನ್ನೆ (ಅ.19) ಬಾಂಗ್ಲಾದೇಶದ ವಿರುದ್ಧ ಪುಣೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 55 ಎಸೆತಗಳಲ್ಲಿ 53 ರನ್ ಕಲೆಹಾಕುವ ಮೂಲಕ ಅಮೋಘ ಅರ್ಧಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.
ಒಂದೆಡೆ ಶುಭಮನ್ ಗಿಲ್ ಅರ್ಧಶತಕದೊಂದಿಗೆ ಫಾರ್ಮ್ಗೆ ಮರಳಿದ್ದು ಕ್ರೀಡಾಭಿಮಾನಿಗಳಿಗೆ ಖುಷಿ ತಂದರೆ, ಮತ್ತೊಂದೆಡೆ ಗಿಲ್ ಅರ್ಧಶತಕವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗಿಲ್-ಸಾರಾ ನಡುವೆ ಪ್ರೀತಿ ಟೀಮ್ ಇಂಡಿಯಾ ಸೇರ್ಪಡೆಯಾಗುವ ಮುನ್ನವೇ ಶುಭಮನ್ ಗಿಲ್ ಮತ್ತು ಸಾರಾ ನಡುವಿನ ಪ್ರೀತಿಯ ವಿಚಾರ ಬಹಳ ಸುದ್ದಿಯಾಗಿತ್ತು. ಆಗಿನ್ನೂ ಗಿಲ್ ದೇಸಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಐಪಿಎಲ್ನಲ್ಲೂ ಭಾಗವಹಿಸಿದ್ದರು. ಆದರೆ, ಈಗಿನಂತೆ ಆಗ ತಮ್ಮ ಬ್ಯಾಟಿಂಗ್ ಸ್ಕಿಲ್ ಮೂಲಕ ಹೆಚ್ಚೇನೂ ಗುರುತಿಸಿಕೊಂಡಿರಲಿಲ್ಲ. ಆ ವೇಳೆಯೇ ಸಾರಾ ಮತ್ತು ಶುಭಮನ್ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು. ಇಬ್ಬರು ಡೇಟಿಂಗ್ ಮಾಡುತ್ತಿರುವ ಸಂಗತಿಯು ಚರ್ಚೆಯಾಗಿತ್ತು. ಒಟ್ಟಾರೆ, ಗಿಲ್ ಸಚಿನ್ ಅಳಿಯನಾಗ್ತಾನೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಹಿಂದೊಮ್ಮೆ ಸಾರಾ, ಗಿಲ್ ಫೀಲ್ಡಿಂಗ್ ಮಾಡುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಹೃದಯದ ಎಮೋಜಿ ಹಾಕಿದ್ದರು. ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದರೂ ಸಹ ಸ್ಕ್ರೀನ್ಶಾಟ್ ವೈರಲ್ ಆಗಿತ್ತು. ಇದಕ್ಕೂ ಮುಂಚೆ ಗಿಲ್, ಹೊಸ ರೇಂಜ್ ರೋವರ್ ಕಾರು ಖರೀದಿಸಿದ್ದಾಗ ಸಾರಾ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗಿತ್ತು. ಸಾರಾ ಸಂಭ್ರಮ ಇತ್ತೀಚೆಗೆ ಇಬ್ಬರ ಬಗ್ಗೆ ಹೆಚ್ಚು ಚರ್ಚೆಯಾಗಿರಲಿಲ್ಲ. ಹೀಗಾಗಿ ಇಬ್ಬರ ಪ್ರೇಮಾಂಕುರ ವಿಚಾರ ತೆರೆಮರೆಗೆ ಸರಿದಿತ್ತು. ಇದೀಗ ನಿನ್ನೆ ನಡೆದ ಪಂದ್ಯದಲ್ಲಿ ಸಾರಾ, ಗಿಲ್ ಅವರ ಅರ್ಧಶತಕವನ್ನು ಸಂಭ್ರಮಿಸಿರುವುದು ಮತ್ತೆ ಪ್ರೀತಿಯ ವಿಚಾರ ಚರ್ಚೆಯಾಗಲು ಶುರುವಾಗಿದೆ. ಪೆವಿಲಿಯನ್ನಲ್ಲಿ ಕುಳಿತಿದ್ದ ಸಾರಾ ಚಪ್ಪಾಳೆ ತಟ್ಟಿ ಗಿಲ್ ಆಫ್ ಸೆಂಚುರಿಯನ್ನು ಸಂಭ್ರಮಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ನಿಲೇಶ್ ತಿವಾರಿ ಎಂಬುದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, 42 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಇರುವುದು ಖಚಿತ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ ಪ್ರದರ್ಶನಕ್ಕೆ ಬಾಂಗ್ಲಾ ತತ್ತರ ಪಂದ್ಯದ ವಿಚಾರಕ್ಕೆ ಬರುವುದಾದರೆ, ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಲಿಟನ್ ದಾಸ್ (66 ರನ್, 82 ಎಸೆತ, 7 ಬೌಂಡರಿ) ಹಾಗೂ ತಂಜಿದ್ ಹಸನ್ (51 ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್) ಒದಗಿಸಿದ ಉತ್ತಮ ಆರಂಭದ ಬಳಿಕ ಭಾರತದ ಬಿಗಿ ದಾಳಿಗೆ ಕುಸಿದು 8 ವಿಕೆಟ್‌ಗೆ 256 ರನ್‌ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಸರಾಗ ಚೇಸಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮಾನ್ ಗಿಲ್ (53 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟದ ನೆರವಿನಿಂದ 41.3 ಓವರ್‌ಗಳಲ್ಲಿ 3 ವಿಕೆಟ್‌ಗೆ 261 ರನ್‌ಗಳಿಸಿ, ಇನ್ನೂ 51 ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು. ಇದರ ನಡುವೆಯೂ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. . ಚೇಸಿಂಗ್ ಮಾಸ್ಟರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (103* ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 48ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯೊಂದಿಗೆ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. (ಏಜೆನ್ಸೀಸ್)