ಕ್ರೀಡೆ

ಇ-ಕ್ರಿಕೆಟ್​ ಲೀಗ್​ನಲ್ಲಿ ಮುಂಬೈ ತಂಡ ಖರೀದಿಸಿದ ಸಾರಾ ತೆಂಡುಲ್ಕರ್​​!

ಮುಂಬೈ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ ಪುತ್ರಿ ಸಾರಾ ತೆಂಡುಲ್ಕರ್​ ಗ್ಲೋಬಲ್​ ಇ-ಕ್ರಿಕೆಟ್​ ಪ್ರೀಮಿಯರ್​ ಲೀಗ್​ನಲ್ಲಿ (ಜಿಇಪಿಎಲ್​) ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಸಚಿನ್​ ತೆಂಡುಲ್ಕರ್​ ಐಪಿಎಲ್​ನಲ್ಲಿ ಈ ಹಿಂದೆ ಮುಂಬೈ ಇಂಡಿಯನ್ಸ್​ ಪರ ಆಡಿದ್ದರೆ, ಈಗ ಅವರ ಪುತ್ರ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರಾಗಿದ್ದಾರೆ. ಇದರ ನಡುವೆ ಸಚಿನ್​ ಪುತ್ರಿಯೂ ಕ್ರಿಕೆಟ್​ ವಿಡಿಯೊ ಗೇಮ್​ ಲೀಗ್​ ಮೂಲಕ ಮುಂಬೈ ಫ್ರಾಂಚೈಸಿ ಜತೆ ಸಂಬಂಧ ಹೊಂದಿದ್ದಾರೆ.

"ಕ್ರಿಕೆಟ್​ ನಮ್ಮ ಕುಟುಂಬದ ಪ್ರಮುಖ ಭಾಗ. ಇ&ಸ್ಪೋರ್ಟ್ಸ್​ ಮೂಲಕ ನಾನೂ ಇದರಲ್ಲಿ ಒಳಗೊಳ್ಳುತ್ತಿರುವುದು ರೋಚಕ ಅನುಭವ. ಜಿಇಪಿಎಲ್​ನಲ್ಲಿ ಮುಂಬೈ ಫ್ರಾಂಚೈಸಿಯ ಒಡತಿಯಾಗಿರುವುದರಿಂದ ಕನಸೊಂದು ನನಸಾದಂತಾಗಿದೆ. ಮುಂಬೈ ನಗರದ ಜತೆಗಿನ ನನ್ನ ಪ್ರೀತಿ ಆಟದೊಂದಿಗೆ ಬೆರೆಯುತ್ತಿದೆ. ಪ್ರತಿಭಾನ್ವಿತ ತಂಡವನ್ನು ಕಟ್ಟಲು ಮತ್ತು ಎಲ್ಲರಿಗೂ ಸ್ಫೂರ್ತಿ ತುಂಬುವ ಮತ್ತು ಮನರಂಜನೆ ನೀಡುವ ಇ-ಸ್ಪೋರ್ಟ್ಸ್​ ತಂಡವನ್ನು ರೂಪಿಸಲು ಉತ್ಸುಕಳಾಗಿದ್ದೇನೆ' ಎಂದು 27 ವರ್ಷದ ಸಾರಾ ಹೇಳಿದ್ದಾರೆ.

2024ರಲ್ಲಿ ಆರಂಭಗೊಂಡ ಜಿಇಪಿಎಲ್​ ಒಟ್ಟು 3.05 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿದೆ. ಇದೀಗ ಟೂರ್ನಿಯ 2ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದ್ದು, 9 ಲಕ್ಷಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.