ಕ್ರೀಡೆ

Sanju Samson-Tilak Varma ಆರ್ಭಟಕ್ಕೆ ನಲುಗಿದ ಹರಿಣ ಪಡೆ; 135 ರನ್​ಗಳ ಭರ್ಜರಿ ಜಯದೊಂದಿಗೆ Team India ಬರೆದ ದಾಖಲೆಗಳು ಒಂದೆರಡಲ್ಲ

ಜೊಹಾನ್ಸ್​​ಬರ್ಗ್​: ಇಲ್ಲಿನ ದಿ ವಾಂಡರರ್ಸ್​​ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ತಂಡವು ಸರ್ವಾಂಗೀಣ ಪ್ರದರ್ಶನದ ಫಲವಾಗಿ 135 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಈ ಮೂಲಕ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ (Team India) ನಾಯಕ ಸೂರ್ಯಕುಮಾರ್​ ಯಾದವ್​ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಸಂಜು ಸ್ಯಾಮ್ಸನ್ (Sanju Samson)​ (109 ರನ್​, 56 ಎಸೆತ, 6 ಬೌಂಡರಿ, 9 ಸಿಕ್ಸರ್​), ತಿಲಕ್​ ವರ್ಮಾ (Tilak Varma) (120 ರನ್​, 47 ಎಸೆತ, 9 ಬೌಂಡರಿ, 10 ಸಿಕ್ಸರ್​) ಶತಕಗಳ ಫಲವಾಗಿ 20 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 283 ರನ್​ಗಳ ಬೃಹತ್​ ಮೊತ್ತವನ್ನು ಪೇರಿಸಿತು.

ಇನ್ನೂ ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾವನ್ನು (South Africa) ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 148 ರನ್​ಗಳಿ ಆಲೌಟ್​ ಮಾಡುವ ಮೂಲಕ ತಂಡಕ್ಕೆ 135 ರನ್​ಗಳ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ. ಭಾರತದ ಪರ ಅರ್ಷ್​ದೀಪ್​ ಸಿಂಗ್​ (3-0-20-3), ಹಾರ್ದಿಕ್​ ಪಾಂಡ್ಯ (3-1-8-1), ರಮನ್​ದೀಪ್​ ಸಿಂಗ್​ (3.2-0-42-1), ವರುಣ್​ ಚಕ್ರವರ್ತಿ (4-0-42-2), ರವಿ ಬಿಷ್ಣೋಯಿ (3-0-28-1), ಅಕ್ಷರ್​ ಪಟೇಲ್​ (2-0-6-2) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ದಾಖಲೆಗಳು ಒಂದೆರಡಲ್ಲ

ಸಂಜು ಸ್ಯಾಮ್ಸನ್​-ತಿಲಕ್​ ವರ್ಮಾ (Sanju Samson-Tilak Varma) ಅಬ್ಬರದ ಫಲವಾಗಿ ಹರಿಣಗಳ ವಿರುದ್ಧ ಬೃಹತ್​ ಜಯ ಸಾಧಿಸಿರುವ ಟೀಮ್​ ಇಂಡಿಯಾ ಟಿ20 ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಒಂದೇ ಪಂದ್ಯದಲ್ಲಿ ಐದು ದಾಖಲೆಗಳನ್ನು ಬರೆಯುವ ಮೂಲಕ ಕ್ರೀಡಾ ವಲಯದಲ್ಲಿ ಸೌಂಡ್​ ಮಾಡುತ್ತಿದೆ.

ಟಿ20 ಸರಣಿಯ (T20 Series) ಅಂತಿಮ ಪಂದ್ಯದಲ್ಲಿ ಬರೋಬ್ಬರಿ 283 ರನ್ ಕಲೆಹಾಕುವ ಮೂಲಕ ಟೀಮ್​ ಇಂಡಿಯಾ (Team India), ವಿದೇಶಿ ನೆಲದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ದೊಡ್ಡ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ. ಕಳೆದೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಸಂಜು ಸ್ಯಾಮ್ಸನ್​ ಈ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗರೆದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು, ಅಂತಿಮ ಪಂದ್ಯದಲ್ಲೂ ಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಈ ಮೂಲಕ ಸಂಜು ಒಂದೇ ವರ್ಷದಲ್ಲಿ 3 ಟಿ20 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸಿದ್ದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಇದೇ ಮೊದಲು ಎಂದು ಹೇಳಲಾಗಿದೆ. ಇದಲ್ಲದೆ ಈ ಜೋಡಿಯು 210 ರನ್​ಗಳ ದಾಖಲೆಯ ಜೊತೆಯಾಟವನ್ನು ಆಡಿದ್ದು, ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಜೊತೆಯಾಟ ನಿರ್ಮಿಸಿದ ದಾಖಲೆಯನ್ನೂ ಈ ಇಬ್ಬರು ಬ್ಯಾಟ್ಸ್‌ಮನ್​ಗಳು ನಿರ್ಮಿಸಿದ್ದಾರೆ.

ಇದಲ್ಲದೆ ನಾಲ್ಕನೇ ಟಿ20ಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಂದ ಸಿಕ್ಸರ್‌ಗಳ ಮಳೆ ಸುರಿಯಿತು. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಒಟ್ಟು 23 ಸಿಕ್ಸರ್‌ಗಳನ್ನು ಬಾರಿಸಿತ್ತು. ಇದೀಗ ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯೂ ಟೀಮ್​ ಇಂಡಿಯಾ ಹೆಸರಿನಲ್ಲಿ ದಾಖಲಾಗಿದೆ. ಈ ಪಂದ್ಯದಲ್ಲಿ ಭಾರತದ ಪರ ತಿಲಕ್ ವರ್ಮಾ 10 ಸಿಕ್ಸರ್, ಸಂಜು ಸ್ಯಾಮ್ಸನ್ 9 ಮತ್ತು ಅಭಿಷೇಕ್ ಶರ್ಮಾ 4 ಸಿಕ್ಸರ್ ಬಾರಿಸಿದ್ದಾರೆ.