Sanju Samson: ಐಪಿಎಲ್ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರನಡೆಯಲು ಸಂಜು ಸ್ಯಾಮ್ಸನ್ ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಈ ಕುರಿತಾಗಿ ಸ್ವತಃ ಸಂಜು ತಮ್ಮ ಫ್ರಾಂಚೈಸಿಗೆ ತನ್ನನ್ನು ಹರಾಜಿನಲ್ಲಿ ರಿಲೀಸ್ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಅಷ್ಟಕ್ಕೂ ಇದರ ಹಿಂದಿರುವ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ಬಗ್ಗೆ ಮಾತನಾಡಿದ್ದು, ಅವರ ನಿರ್ಗಮನಕ್ಕೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕಾರಣ ಎಂದಿದ್ದಾರೆ.
ಇದನ್ನೂ ಓದಿ: ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ… ‘ಸಾಹಸ ಸಿಂಹ’ ಸಮಾಧಿ ತೆರವು ಕುರಿತು ನಟ ಸುದೀಪ್ ಭಾವುಕ ನುಡಿ | Dr Vishnuvardhan
ಈ ಕುರಿತಂತೆ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಆಕಾಶ್, "ಸುಖಾಸುಮ್ಮನೆ ಸಂಜು ಯಾಕೆ ತಮ್ಮ ತಂಡವನ್ನು ಬಿಟ್ಟು ಹೋಗ್ತಾರೆ? ನನ್ನ ಪ್ರಕಾರ, ಕಳೆದ ಬಾರಿಯ ಆಕ್ಷನ್ನಲ್ಲಿ ಸ್ಟಾರ್ ಬ್ಯಾಟರ್ ಜಾಸ್ ಬಟ್ಲರ್ರನ್ನು ಫ್ರಾಂಚೈಸಿ ಕೈಬಿಟ್ಟಿತು. ಯಶಸ್ವಿ ಜೈಸ್ವಾಲ್ಗೆ ಓಪನಿಂಗ್ ಅವಕಾಶ ಕೊಡಲು ಜಾಸ್ರನ್ನು ಬಿಟ್ಟರು. ಈಗ ತಂಡದ ಆರಂಭಿಕರಾಗಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಇರುವುದರಿಂದ ಸ್ಥಾನಗಳು ಬದಲಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದ ಸ್ಯಾಮ್ಸನ್ ಆರ್ಆರ್ನಿಂದ ಹೊರಗುಳಿಯಲು ಬಯಸಿರಬಹುದು" ಎಂದು ಅಭಿಪ್ರಾಯಿಸಿದ್ದಾರೆ.
"ಈ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ, ರಾಜಸ್ಥಾನ ರಾಯಲ್ಸ್ನಿಂದ ಸಂಜು ಸ್ಯಾಮ್ಸನ್ ಹೊರಬಂದರೆ, ಅವರ ಮುಂದಿರುವ ಆಯ್ಕೆ ಕೋಲ್ಕತ ನೈಟ್ ರೈಡರ್ಸ್. ಈ ವಿಚಾರದಲ್ಲಿ ನನಗೆ ಸಿಎಸ್ಕೆ ಹೆಸರು ಮೊದಲಿಗೆ ಬರುವುದಿಲ್ಲ. ಕೆಕೆಆರ್ ಬಳಿ ಉತ್ತಮ ವಿಕೆಟ್ ಕೀಪರ್-ಬ್ಯಾಟರ್ ಇಲ್ಲ. ಹೀಗಾಗಿ ಅವರ ಮುಂದಿರುವ ಒಂದೊಳ್ಳೆ ಆಯ್ಕೆ ಸ್ಯಾಮ್ಸನ್. ಫ್ರಾಂಚೈಸಿ ಅವರನ್ನು ತಮ್ಮ ಮುಂದಿನ ಕ್ಯಾಪ್ಟನ್ ಆಗಿಯೂ ಮಾಡಿಕೊಳ್ಳಬಹುದು. ಇಲ್ಲಿ ನಾನು ಅಜಿಂಕ್ಯಾ ರಹಾನೆ ಅವರ ನಾಯಕತ್ವದ ಬಗ್ಗೆ ಮಾತನಾಡಲ್ಲ. ಅವರಿಂದಲೂ ಉತ್ತಮ ಕ್ಯಾಪ್ಟನ್ಸಿ ಮತ್ತು ರನ್ಗಳ ಕೊಡುಗೆ ಬಂದಿದೆ" ಎಂದು ಹೇಳಿದ್ದಾರೆ(ಏಜೆನ್ಸೀಸ್).