ಕ್ರೀಡೆ

ಅಮ್ಮನಾದ ಬಳಿಕ ಎರಡನೇ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ

ಒಸ್ಟ್ರಾವ (ಜೆಕ್ ಗಣರಾಜ್ಯ): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಲಿ ವರ್ಷದ ಮೊದಲ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿದ್ದಾರೆ. ಚೀನಾದ ಶುಯಿ ಝಂಗ್ ಜತೆಗೂಡಿ ಒಸ್ಟ್ರಾವ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. 34 ವರ್ಷದ ಸಾನಿಯಾಗೆ ಇದು ಅಮ್ಮನಾದ ಬಳಿಕ 2ನೇ ಮತ್ತು ವೃತ್ತಿಜೀವನದ 43ನೇ ಪ್ರಶಸ್ತಿ ಗೆಲುವಾಗಿದೆ.

2ನೇ ಶ್ರೇಯಾಂಕಿತ ಇಂಡೋ-ಚೈನೀಸ್ ಜೋಡಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅಮೆರಿಕದ ಕೈಟ್ಲಿನ್ ಕ್ರಿಶ್ಚಿಯನ್ ಮತ್ತು ನ್ಯೂಜಿಲೆಂಡ್‌ನ ಇರಿನ್ ರೌಟ್‌ಲಿಫ್​ ಜೋಡಿಯನ್ನು 6-3, 6-2 ನೇರಸೆಟ್‌ಗಳಿಂದ ಪರಾಭವಗೊಳಿಸಿತು. ಸಾನಿಯಾ ಜೋಡಿ ಒಂದು ಗಂಟೆ ಮತ್ತು 4 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡಿತು.

ಮಾಜಿ ವಿಶ್ವ ನಂ. 1 ಸಾನಿಯಾಗೆ ಇದು ಹಾಲಿ ಟೆನಿಸ್ ಋತುವಿನ 2ನೇ ಫೈನಲ್ ಆಗಿತ್ತು. ಕಳೆದ ತಿಂಗಳು ಕ್ಲೆವ್‌ಲ್ಯಾಂಡ್ ಓಪನ್‌ನಲ್ಲಿ ಅವರು ಕ್ರಿಸ್ಟಿನಾ ಮೆಕ್‌ಹಾಲೆ ಜತೆ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2020ರ ಜನವರಿಯಲ್ಲಿ ಹೋಬರ್ಟ್‌ನಲ್ಲಿ ಸಾನಿಯಾ ಕೊನೇ ಮತ್ತು ಅಮ್ಮನಾದ ಬಳಿಕ ಮೊದಲ ಪ್ರಶಸ್ತಿ ಜಯಿಸಿದ್ದರು.