ನವದೆಹಲಿ: ವೃತ್ತಿಪರ ಟೆನಿಸ್ ಚಟುವಟಿಕೆ ಪುನರಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಈ ಮಾಸಾಂತ್ಯದಲ್ಲಿ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಕೂಡ ನಡೆಯಲಿದೆ. ಆದರೆ ಭಾರತದಲ್ಲಿನ ಕರೊನಾ ಹಾವಳಿಯಿಂದಾಗಿ ಅಭ್ಯಾಸದ ಕೊರತೆ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಸಾನಿಯಾ ಮಿರ್ಜಾ ಯುಎಸ್ ಓಪನ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಕನ್ನಡಿಗ ರೋಹನ್ ಬೋಪಣ್ಣ ಟೂರ್ನಿಯಲ್ಲಿ ಆಡುವ ಬಗ್ಗೆ ಸದ್ಯಕ್ಕೆ ಕಾದುನೋಡಲು ನಿರ್ಧರಿಸಿದ್ದಾರೆ.
33 ವರ್ಷದ ಸಾನಿಯಾ ಮಿರ್ಜಾ ಫ್ಲಷಿಂಗ್ ಮೆಡೋಸ್ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ನೇರವಾಗಿ ಕಣಕ್ಕಿಳಿಯಲು ಅರ್ಹರಿದ್ದಾರೆ. ಸದ್ಯ ಅವರ ವಿಶ್ವ ರ್ಯಾಂಕಿಂಗ್ 226ಕ್ಕೆ ಕುಸಿದಿದ್ದರೂ, 2017ರಲ್ಲಿ ಅವರು ಗಾಯಗೊಂಡು ಕಣದಿಂದ ನಿರ್ಗಮಿಸಿದಾಗ ಇದ್ದ ವಿಶ್ವ ನಂ. 9 ಪಟ್ಟದ ಅವರಿಗೆ ವಿಶೇಷ ರ್ಯಾಂಕಿಂಗ್ ಸ್ಥಾನವಿದೆ. ಬಳಿಕ ತಾಯ್ತನದ ಬಿಡುವನ್ನೂ ಪಡೆದುಕೊಂಡಿದ್ದರ ಅವರು 2020ರ ಆರಂಭದಲ್ಲಿ ಮರಳಿ ಕಣಕ್ಕಿಳಿದಿದ್ದರು. ಹೋಬರ್ಟ್ ಓಪನ್ ಜಯಿಸುವ ಮೂಲಕ ಯಶಸ್ವಿ ಪುನರಾಗಮನವನ್ನೂ ಕಂಡಿದ್ದರು. ಆದರೆ ಹಾಲಿ ಪರಿಸ್ಥಿತಿಯಲ್ಲಿ ಅವರು ಪುತ್ರನ ಜತೆಗೆ ಅಥವಾ ಪುತ್ರನನ್ನು ತವರಿನಲ್ಲಿ ಬಿಟ್ಟು ನ್ಯೂಯಾರ್ಕ್ಗೆ ಪ್ರಯಾಣಿಸಲು ಸಿದ್ಧರಿಲ್ಲ.
ಮತ್ತೊಂದೆಡೆ, ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಅವಕಾಶವನ್ನು ಇನ್ನೂ ಮುಕ್ತವಾಗಿಟ್ಟಿದ್ದಾರೆ. ಆಗಸ್ಟ್ 3ರ ಒಳಗಾಗಿ ನಿರ್ಧಾರವನ್ನು ತಿಳಿಸುವಂತೆ ಯುಎಸ್ ಓಪನ್ ಸಂಘಟಕರು ಸೂಚಿಸಿದ್ದಾರೆ. ಆ ಬಳಿಕ ವಿಮಾನ ಬುಕ್ ಮಾಡಬಹುದೇ ಮತ್ತು ನಾನು ಯುಎಸ್ಗೆ ಪ್ರಯಾಣಿಸಬಹುದೇ ಎಂಬುದನ್ನು ಪರಿಶೀಲಿಸುವೆ ಎಂದು ಬೋಪಣ್ಣ ಹೇಳಿದ್ದಾರೆ.
ಯುಎಸ್ ಓಪನ್ನಲ್ಲಿ ಈ ಬಾರಿ 32 ಜೋಡಿಗಳಿಗೆ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ಅದರಲ್ಲೂ ಸಿಂಗಲ್ಸ್ ಆಟಗಾರರು ಡಬಲ್ಸ್ನಲ್ಲಿ ಆಡುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಹಾಲಿ ವಿಶ್ವ ನಂ. 37 ಆಟಗಾರರಾಗಿರುವ ಬೋಪಣ್ಣ ಹೊಸ ಜತೆಗಾರರ ಜತೆಗೆ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಾಗಿದೆ. ಅವರ ಹಿಂದಿನ ಜತೆಗಾರ ಕೆನಡದ ಡೆನಿಸ್ ಶಪವಲೋವ್ ಕೇವಲ ಸಿಂಗಲ್ಸ್ನಲ್ಲಿ ಮಾತ್ರ ಆಡಲು ಆದ್ಯತೆ ನೀಡಲಿರುವುದು ಇದಕ್ಕೆ ಕಾರಣ. ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಸ್ಪರ್ಧೆಯನ್ನು ಕೈಬಿಡಲಾಗಿದೆ. ಯುಎಸ್ ಓಪನ್ ಆಗಸ್ಟ್ 31ರಂದು ಆರಂಭಗೊಳ್ಳಲಿದೆ.