ಹೋಬರ್ಟ್: ಎರಡು ವರ್ಷಗಳ ಕಾಲ ತಾಯ್ತನದ ರಜೆಯಲ್ಲಿದ್ದ ಸಾನಿಯಾ ಮಿರ್ಜಾ ಮರಳಿ ಕಣಕ್ಕಿಳಿದು ಆಡಿದ ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಜಯಿಸುವ ಮೂಲಕ ಗಮನಸೆಳೆದಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಉಕ್ರೇನ್ನ ನಾಡಿಯಾ ಕಿಚೆನಾಕ್ ಜೋಡಿ ಹೋಬರ್ಟ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಇಂಡೋ-ಉಕ್ರೇನ್ ಜೋಡಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 6-4, 6-4 ನೇರ ಸೆಟ್ಗಳಿಂದ ಚೀನಾದ ಶೌಯಿ ಪೆಂಗ್ ಹಾಗೂ ಶೌಯಿ ಜಾಂಗ್ ಜೋಡಿಯನ್ನು ಸೋಲಿಸಿತು. ಒಂದು ಗಂಟೆ 21 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಇಂಡೋ-ಉಕ್ರೇನ್ ಜೋಡಿ ಭರ್ಜರಿ ನಿರ್ವಹಣೆಯೊಂದಿಗೆ ಗೆಲುವಿನ ನಗೆ ಬೀರಿತು. ಸಾನಿಯಾ ಜೋಡಿ 96 ಲಕ್ಷ ರೂ. ಬಹುಮಾನ ಹಂಚಿಕೊಂಡಿತು. 2018ರ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸಾನಿಯಾ ಆಡಿದ ಮೊದಲ ಟೂರ್ನಿ ಇದಾಗಿದೆ. ಈ ಪ್ರಶಸ್ತಿಯೊಂದಿಗೆ 33 ವರ್ಷದ ಸಾನಿಯಾ ಮುಂಬರುವ ಆಸ್ಟ್ರೇಲಿಯನ್ ಓಪನ್ ಹಾಗೂ ಟೋಕಿಯೊ ಒಲಿಂಪಿಕ್ಸ್ಗೆ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ. ಸಾನಿಯಾಗೆ ಇದು 42ನೇ ಡಬ್ಲ್ಯುಟಿಎ ಡಬಲ್ಸ್ ಪ್ರಶಸ್ತಿಯಾಗಿದ್ದು, 2017ರ ಬ್ರಿಸ್ಬೇನ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಕಡೆಯ ಬಾರಿಗೆ ಅಮೆರಿಕದ ಬೆಥಾನಿ ಮಾಟೆಕ್ ಜತೆಗೂಡಿ ಪ್ರಶಸ್ತಿ ಗೆದ್ದಿದ್ದರು.
ಮಿಶ್ರ ಡಬಲ್ಸ್ನಲ್ಲಿ ಸಾನಿಯಾಗೆ ಬೋಪಣ್ಣ ಜೋಡಿ: ಸಾನಿಯಾ ಮಿರ್ಜಾ ಸೋಮವಾರ ದಿಂದ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದವರೇ ಆದ ರೋಹನ್ ಬೋಪಣ್ಣ ಜತೆಗೂಡಿ ಕಣಕ್ಕಿಳಿಯಲಿದ್ದಾರೆ. ಈ ಮುನ್ನ ನಿಗದಿಯಾಗಿದ್ದ ಪ್ರಕಾರ ಸಾನಿಯಾ ಅಮೆರಿಕದ ರಾಜೀವ್ ರಾಮ್ ಜತೆ ಆಡಬೇಕಾಗಿತ್ತು. ಆದರೆ ರಾಜೀವ್ ಗಾಯದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ 2016ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಸಾನಿಯಾ-ಬೋಪಣ್ಣ ಮೊದಲ ಬಾರಿಗೆ ಜತೆಯಾಗಿ ಆಡಲಿದ್ದಾರೆ. ಬೋಪಣ್ಣ ಕೂಡ ಕಳೆದ ವಾರ ಕತಾರ್ ಓಪನ್ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದು ಹೊಸ ವರ್ಷವನ್ನು ಶುಭಾರಂಭ ಮಾಡಿದ್ದರು. -ಪಿಟಿಐ/ಏಜೆನ್ಸೀಸ್
ಪ್ರಶಸ್ತಿ ನಿರೀಕ್ಷಿಸಿರಲಿಲ್ಲ
ಕಳೆದ 27 ತಿಂಗಳಲ್ಲಿ ಆಡಿದ ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ ಸಾನಿಯಾ ಮಿರ್ಜಾ, ಈ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇರಲಿಲ್ಲ. ಇದೊಂದು ಅಚ್ಚರಿ ಎಂದು ಹೇಳಿದ್ದಾರೆ. ನನ್ನ ಆಟದ ಲಯ ಇನ್ನೂ ಮಾಸಿರಲಿಲ್ಲ. ನಾನೆಣಿಸಿದ್ದಕ್ಕಿಂತ ಉತ್ತಮ ಆಟವನ್ನೇ ಆಡಲು ಸಾಧ್ಯವಾಗುತ್ತಿದೆ. ಆದರೆ ನನ್ನ ಇನ್ನೂ ಸುಧಾರಣೆ ಕಾಣಬೇಕಿದೆ ಎಂದು ಸಾನಿಯಾ ಹೇಳಿದ್ದಾರೆ. ಯಾವುದೇ ಒತ್ತಡ, ನಿರೀಕ್ಷೆಗಳಿರದೆ ಕಣಕ್ಕಿಳಿದಿದ್ದೆ. ಆದರೆ ಟೂರ್ನಿಯ ಮೊದಲ ಪಂದ್ಯ ಆಡುವಾಗ ಸ್ವಲ್ಪ ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ. ಹಾಲಿ ಸ್ಪರ್ಧಾತ್ಮಕ ಟೆನಿಸ್ನಲ್ಲಿ ಮಿಂಚುತ್ತಿ ರುವ ಅಮ್ಮಂದಿರಾದ ಸೆರೇನಾ ವಿಲಿಯಮ್್ಸ, ವಿಕ್ಟೋ ರಿಯಾ ಅಜರೆಂಕಾ ಮತ್ತು ಎವ್ಗೆನಿಯಾ ರೋಡಿನಾ ಅವರಿಂದ ಯಾವುದೇ ಸಲಹೆ ಪಡೆದಿಲ್ಲ. ಆದರೆ ಸ್ಪೂರ್ತಿ ಯನ್ನಂತೂ ಪಡೆದಿದ್ದೇನೆ ಎಂದಿದ್ದಾರೆ. ಮಗ ಇಜಾನ್ಗೆ ಜನ್ಮ ನೀಡಿದ ಬಳಿಕ ಸಾನಿಯಾ ವ್ಯಾಯಾಮದ ಮೂಲಕ 4 ತಿಂಗಳಲ್ಲಿ 26 ಕೆಜಿ ಇಳಿಸಿಕೊಂಡಿದ್ದರು.