ಕ್ರೀಡೆ

ಕುಸ್ತಿಪಟು ಸಂಗ್ರಾಮ್​ ಸಿಂಗ್​ ಈಗ ಕೃಷಿಯಲ್ಲಿ ಮಗ್ನ

ನವದೆಹಲಿ: ಕುಸ್ತಿಪಟು ಸಂಗ್ರಾಮ್​ ಸಿಂಗ್​ ಲಾಕ್​ಡೌನ್​ ಶುರುವಾದ ನಂತರದಲ್ಲಿ ತವರು ರಾಜ್ಯ ಹರಿಯಾಣದ ರೋಹ್ಟಕ್​ನಲ್ಲೇ ಕಳೆದ ಕೆಲ ತಿಂಗಳುಗಳಿಂದ ನೆಲೆಸಿದ್ದಾರೆ. ಈ ವೇಳೆ ಅವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ.

ಕುಸ್ತಿ ಅಖಾಡಕ್ಕೆ ಇಳಿದ ಬಳಿಕ ನಟನೆ, ಮಾಡೆಲಿಂಗ್​ನಲ್ಲೂ ತೊಡಗಿಸಿಕೊಂಡಿದ್ದ ಸಂಗ್ರಾಮ್​ ಸಿಂಗ್​ ತವರಿನಿಂದ ಸಂಪೂರ್ಣ ದೂರ ಉಳಿದುಬಿಟ್ಟಿದ್ದರು. ಆದರೆ ಲಾಕ್​ಡೌನ್​ನಿಂದ ಅವರು ತವರೂರಿಗೆ ಮರಳಿದ್ದು ಮಾತ್ರವಲ್ಲದೆ ಕೃಷಿ ಚಟುವಟಿಕೆಗೆ ಮರಳಿ ಬಾಲ್ಯದ ದಿನಗಳನ್ನು ಮರಳಿ ಕಂಡಿದ್ದಾರೆ. 'ನಾನು ಹಿಂದೆಯೂ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದೆ. ನಾನು ಇದನ್ನು ಸಾಕಷ್ಟು ಆನಂದಿಸುತ್ತೇನೆ. ಮಣ್ಣಿನಲ್ಲಿ ಕೆಲಸ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಭೂಮಿಯ ಜತೆಗೆ ನಮ್ಮ ಒಡನಾಟ ಹೆಚ್ಚುತ್ತದೆ. ನಾನು ಹಳೆಯ ದಿನಗಳನ್ನು ಮತ್ತೆ ಜೀವಿಸುತ್ತಿದ್ದೇನೆ. ಈ ಮೂಲಕ ಆರೋಗ್ಯಕರ ಜೀವನವೂ ನನ್ನದಾಗಿದೆ' ಎಂದು ಸಂಗ್ರಾಮ್​ ಸಿಂಗ್​ ಹೇಳಿದ್ದಾರೆ.

2015ರ ಕಾಮನ್ವೆಲ್ತ್​ ಹೆವಿವೇಟ್​ ಕುಸ್ತಿ ಚಾಂಪಿಯನ್​ಷಿಪ್​ ವಿಜೇತ ಸಂಗ್ರಾಮ್​ ಸಿಂಗ್​, ವರ್ಲ್ಡ್​ ರೆಸ್ಲಿಂಗ್​ ಪ್ರೊಫೆಷನಲ್ಸ್​​ನಿಂದ ವಿಶ್ವದ ಅತ್ಯುತ್ತಮ ರೆಸ್ಲರ್​ ಪ್ರಶಸ್ತಿಗೂ ಭಾಜರಾಗಿದ್ದಾರೆ. ನಾನು ಹಳ್ಳಿಯಲ್ಲಿ ಈಗ ಸರಳವಾದ ಜೀವನ ನಡೆಸುತ್ತಿದ್ದೇನೆ. ಇಲ್ಲಿಂದಲೇ ನನ್ನ ಜೀವನದ ಪ್ರಯಾಣ ಆರಂಭವಾಗಿತ್ತು ಎಂದು ಸಂಗ್ರಾಮ್​ ಸಿಂಗ್​ ಹೇಳಿದ್ದಾರೆ.

ನಟಿ ಪಾಯಲ್​ ರೋಹ್ಟಗಿ ಜತೆ 2014ರಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂಗ್ರಾಮ್​ ಸಿಂಗ್​, ಈ ವರ್ಷ ವಿವಾಹವಾಗುವ ಯೋಜನೆಯಲ್ಲಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಅವರ ವಿವಾಹ ಯೋಜನೆ ಮುಂದೂಡಲ್ಪಟ್ಟಿದೆ. ಭಾರತದ ಮೊದಲ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟು ಕೆಡಿ ಜಾಧವ್​ ಅವರ ಜೀವನಾಧಾರಿತ ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿರುವ ಸಂಗ್ರಾಮ್​ ಸಿಂಗ್​, ಶೀಘ್ರದಲ್ಲೇ ಸಿನಿಮಾವನ್ನು ಆರಂಭಿಸುವ ಯೋಜನೆಯನ್ನೂ ಹೊಂದಿದ್ದಾರೆ.