ಕ್ರೀಡೆ

ಲೀಗ್ ಕಡೇ ಹಂತದಲ್ಲಿ ಸಿಎಸ್‌ಕೆಗೆ ಆಘಾತ, ಹೊರಬಿದ್ದ ಸ್ಟಾರ್ ಆಟಗಾರ

ಲಂಡನ್: ಬೆನ್ನು ನೋವಿನಿಂದ ಬಳಲುತ್ತಿದ್ದ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ‌್ರನ್, ಐಪಿಎಲ್‌ನ ಉಳಿದ ಭಾಗ ಹಾಗೂ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ತಿಳಿಸಿದೆ. ಸದ್ಯದಲ್ಲೇ ಇಂಗ್ಲೆಂಡ್‌ಗೆ ವಾಪಸಾಗಲಿರುವ ಕರ‌್ರನ್ ಮುಂದಿನ ವಾರ ಮತ್ತಷ್ಟು ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದು, ಇಸಿಬಿ ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಲಿದೆ. ‘ಶನಿವಾರ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಕರ‌್ರನ್ ಬೆನ್ನು ನೋವಿಗೆ ತುತ್ತಾಗಿದ್ದರು. ಬಳಿಕ ನಡೆಸಿದ ಸ್ಕ್ಯಾನಿಂಗ್ ನಲ್ಲಿ ಗಾಯಗೊಂಡಿರುವುದು ಪತ್ತೆಯಾಗಿದೆ’ ಎಂದು ಇಸಿಬಿ ತಿಳಿಸಿದೆ.

ಕರ‌್ರನ್ ಸಹೋದರ ಟಾಮ್ ಕರ‌್ರನ್ ಅವರನ್ನು ಇಂಗ್ಲೆಂಡ್ ವಿಶ್ವಕಪ್ ತಂಡಕ್ಕೆ ಡ್ರಾಫ್ಟ್​ ಮಾಡಲಾಗಿದೆ. ಅವರೊಂದಿಗೆ ಸರ‌್ರೆಯ ವೇಗಿ ರೀಸ್ ಟಾಪ್ಲೆ ಅವರನ್ನು ಮೀಸಲಾತಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ 23 ವರ್ಷದ ಕರ‌್ರನ್, 9 ಪಂದ್ಯಗಳಿಂದ 56 ರನ್‌ಗಳಿಸಿ, 9 ವಿಕೆಟ್ ಕಬಳಿಸಿದ್ದರು. ‘ಅನಿರೀಕ್ಷಿತವಾಗಿ ಐಪಿಎಲ್‌ನ ಉಳಿದ ಭಾಗ ಹಾಗೂ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಕೊಳ್ಳುತ್ತಿರುವೆ’ ಎಂದು ಸ್ಯಾಮ್ ಕರ‌್ರನ್ ತಿಳಿಸಿದ್ದಾರೆ. ಕರ‌್ರನ್, 24 ಟೆಸ್ಟ್, 11 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿದ್ದಾರೆ.