ಕ್ರೀಡೆ

1983ರ ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾ ಆಟಗಾರರ ದಿನ ಭತ್ಯೆ ಎಷ್ಟಿತ್ತು? ಇಲ್ಲಿದೆ ನೋಡಿ ವಿವರ…

ನವದೆಹಲಿ: 1983ರ ಜೂನ್​ 25ರಂದು ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಕಪಿಲ್​ ದೇವ್​ ಬಳಗ, ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲಿ ಪ್ರುಡೆನ್ಶಿಯಲ್​ ವಿಶ್ವಕಪ್​ ಟ್ರೋಫಿ ಎತ್ತಿಹಿಡಿದಿತ್ತು. ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಾಯಿಸಿದ ಆ ಗೆಲುವಿಗೆ ಇದೀಗ 40 ವರ್ಷ ಪೂರ್ಣಗೊಂಡಿದೆ.

ವಿಶ್ವಕಪ್ ಗೆಲುವಿನ ನಂತರ ಭಾರತ ಮೊದಲ ತನ್ನ ಮೊದಲ ಸರಣಿಯನ್ನು ಪಾಕಿಸ್ತಾನದ ವಿರುದ್ಧ ಆಡಿತು. ವಿಶ್ವಕಪ್ ವಿಜೇತ ಭಾರತ ತಂಡವು ಪ್ರಧಾನ ಮಂತ್ರಿ ಪರಿಹಾರ ನಿಧಿ ಸಂಗ್ರಹಕ್ಕಾಗಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಿತು. ಇದೀಗ ಬರೋಬ್ಬರಿ 40 ವರ್ಷಗಳ ನಂತರ ತಂಡದ ಆಟಗಾರರು ಈ ಪಂದ್ಯಕ್ಕೆ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಎಂಬುದು ಬಹಿರಂಗವಾಗಿದೆ.

ಪಾಕಿಸ್ತಾನದ ಮಾಜಿ ಆಟಗಾರ, ಸದ್ಯ ಕಾಮೆಂಟೇಟರ್ ಆಗಿರುವ ರಮೀಜ್ ರಾಜಾ 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಪೇಸ್ಲಿಪ್ ಅನ್ನು ಟ್ವೀಟ್ ಮಾಡುವುದರೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀಯ ಆಟಗಾರರಿಗೆ ಮೂರು ದಿನಗಳವರೆಗೆ 200 ರೂ. ನಂತೆ ದೈನಂದಿನ ಭತ್ಯೆಯಂತೆ, ಒಟ್ಟು 600 ರೂ. ಮೊತ್ತ ನೀಡಲಾಯಿತು. ಅದರ ಮೇಲೆ ಆಟಗಾರರ ಪಂದ್ಯದ ಶುಲ್ಕವು 1500 ರೂ. ಆಗಿತ್ತು. ಅಂತಿಮವಾಗಿ ಆಟಗಾರರು ನಿಗದಿಪಡಿಸಿದ 2100 ರೂ. ಮೊತ್ತವನ್ನು ಪಡೆದುಕೊಂಡರು. ಆ ಕಾಲದಲ್ಲಿ ಇದೊಂದು ದೊಡ್ಡ ಮೊತ್ತವೆಂದು ಪರಿಗಣಿಸಲಾಗಿತ್ತು ಎಂದು ತಿಳಿಸಿದ್ದಾರೆ.

ರಮೀಜ್ ರಾಜಾ 1986-87ರಲ್ಲಿ ಭಾರತ ಪ್ರವಾಸಕ್ಕಾಗಿ ಪಾವತಿಸಿದ ಹಣದೊಂದಿಗೆ ಮೊತ್ತವನ್ನು ಹೋಲಿಸಿದ್ದಾರೆ. ಐದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಕ್ಕಾಗಿ 55000 ರೂ. ಸಂಭಾವನೆ ಪಡೆದಿದ್ದೇನೆ ಎಂದು ನೆನಪಿಸಿಕೊಂಡರು.

ಅಲ್ಪ ಬಹುಮಾನ ಮೊತ್ತ

ಭಾರತ ಕ್ರಿಕೆಟ್​ ತಂಡದ ಆಟಗಾರರು ಈಗ ಕೋಟಿ ಲೆಕ್ಕಾಚಾರದಲ್ಲಿ ಸಂಭಾವನೆ ಗಳಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ 1983ರ ವಿಶ್ವಕಪ್​ ಗೆಲುವಿನ ನಂತರ ಆದ ಬದಲಾವಣೆ. ಆದರೆ 83ರ ವಿಶ್ವಕಪ್​ ವಿಜೇತ ತಂಡದ ಆಟಗಾರರ ಸಂಭಾವನೆ ಸಾವಿರದ ಲೆಕ್ಕಾಚಾರದಲ್ಲೇ ಇತ್ತು. ಕಪಿಲ್​ ದೇವ್​ ಬಳಗದ ಆಟಗಾರರಿಗೆ ಪ್ರತಿ ಪಂದ್ಯದ ಸಂಭಾವನೆ 1,500 ರೂ. ಆಗಿತ್ತು. ಜತೆಗೆ 200 ರೂ. ದಿನಭತ್ಯೆ. ವಿಶ್ವಕಪ್​ ಪ್ರಾಯೋಜಕ ಪ್ರುಡೆನ್ಶಿಯಲ್​ ಕಂಪನಿಯಿಂದ ಆಗ 20 ಸಾವಿರ ಪೌಂಡ್ಸ್​ ಬಹುಮಾನ ಲಭಿಸಿತ್ತು. ಲತಾ ಮಂಗೇಶ್ಕರ್​ ಸಾರಥ್ಯದಲ್ಲಿ ಆಗ ಸಂಗೀತಗೋಷ್ಠಿಯೊಂದನ್ನು ನಡೆಸುವ ಮೂಲಕ ಹಣ ಸಂಗ್ರಹ ಮಾಡಿದ್ದ ಬಿಸಿಸಿಐ, ಎಲ್ಲ ಆಟಗಾರರಿಗೆ ತಲಾ 1 ಲಕ್ಷ ರೂ. ಬಹುಮಾನ ವಿತರಿಸಿತ್ತು. ಕಪಿಲ್​ ದೇವ್​ ಸಹಿತ ಕೆಲ ಆಟಗಾರರಿಗೆ ಆಗ ವಿವಿಧ ಜಾಹೀರಾತು ಆಫರ್​ಗಳಿಂದ 30ರಿಂದ 50 ಸಾವಿರ ರೂ. ಮೊತ್ತದ ಒಪ್ಪಂದಗಳು ಲಭಿಸಿದ್ದವು.