ಕ್ರೀಡೆ

ನೌಕರಿಗೆ ಹಾಜರಾಗಲು ಊರಿಗೆ ಹೊರಟ ಪ್ರತಿಭಟನಾನಿರತ ಕುಸ್ತಿಪಟುಗಳು

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ರೀಡಾಪಟುಗಳು ದೆಹಲಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕುಸ್ತಿಪಟುಗಳಾದ ಬಜರಂಗ್​ ಪೂನಿಯಾ, ಸಾಕ್ಷಿ ಮಲಿಕ್​, ವಿನೇಶ್​ ಪೋಗಟ್ ಸೋಮವಾರದಿಂದ ತಮ್ಮ ಕೆಲಸಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ರೈಲ್ವೆಯಲ್ಲಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದು ತಮ್ಮ ಕೆಲಸಕ್ಕೆ ವರದಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಕೆಲ ಹೊತ್ತಿನ ಮುನ್ನ ಕುಸ್ತಿಪಟುಗಳು​ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ವದಂತಿ ಜೋರಾಗಿ ಹಬ್ಬಿತ್ತು.

ಕೆಲಸಕ್ಕೆ ವಾಪಸ್​

ಈ ಕುರಿತು ಟ್ವೀಟ್​ ಮಾಡಿರುವ ಸಾಕ್ಷಿ ಮಲಿಕ್​ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಿಂದ ನಾವು ಹಿಂದೆ ಸರಿಯುವ ಮಾತಿಲ್ಲ. ಪ್ರತಿಭಟನೆಯ ಜೊತೆಗೆ ನಾನು ರೈಲ್ವೆಯಲ್ಲಿನ ನನ್ನ ಕೆಲಸಕ್ಕೆ ಮರಳುತ್ತಿದ್ದೇನೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಸ್ತಿಪಟು ಬಜರಂಗ್​ ಪೂನಿಯಾ ಟ್ವೀಟ್​ ಮಾಡಿ ಪ್ರತಿಭಟನೆಯಿಂದ ನಾವು ಹಿಂಪಡಯುತ್ತಿದ್ದೇವೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ FIR ಹಿಂಪಡೆಯುತ್ತಾರೆ ಎಂಬ ವಿಚಾರವು ಸತ್ಯಕ್ಕೆ ದೂರವಾದ ಮಾತು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದ್ಧಾರೆ.