ರಾಂಚಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕರೊನಾ ಪೀಡಿತರಿಗೆ ನೆರವಾಗುತ್ತಿರುವ ಪುಣೆ ಮೂಲದ ಮುಕುಲ್ ಮಾದೇವ್ ಫೌಂಡೇಷನ್ನ ಕ್ರೌಡ್ಫಂಡಿಂಗ್ಗೆ 1 ಲಕ್ಷ ರೂ. ದೇಣಿಗೆ ನೀಡಿ ನೆರವಾಗಿದ್ದಾರೆ ಎಂಬ ವರದಿ ಶುಕ್ರವಾರ ಹರಿದಾಡಿತ್ತು.
ಅದರ ಬೆನ್ನಲ್ಲೇ, 800 ಕೋಟಿ ರೂ.ಗೂ ಅಧಿಕ ಆಸ್ತಿಯ ಒಡೆಯ ಧೋನಿ, ಕೇವಲ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಧೋನಿ ಪತ್ನಿ ಸಾಕ್ಷಿ, ‘ಇದೊಂದು ಸುಳ್ಳು ಸುದ್ದಿ. ಇಂಥ ಸೂಕ್ಷ್ಮ ಸಮಯದಲ್ಲಿ ಈ ರೀತಿಯ ಫೇಕ್ ನ್ಯೂಸ್ಗಳನ್ನು ಹರಡಬೇಡಿ. ಜವಾಬ್ದಾರಿಯುತವಾಗಿ ವರ್ತಿಸಿ’ ಎಂದು ಟ್ವೀಟಿಸಿ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೆ ಮುನ್ನ, 1 ಲಕ್ಷ ರೂ. ಧೋನಿ ಪಾಲಿಗೆ ಏನೇನೂ ಅಲ್ಲ. ಇನ್ನಷ್ಟು ಕೊಡಬಹುದಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕಿಸಿದ್ದರು. ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಅವರನ್ನು ನೋಡಿ ಧೋನಿ ಕಲಿಯಲಿ ಎಂದು ಸಲಹೆ ನೀಡಿದ್ದರು. ಜತೆಗೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬ 2.25 ಲಕ್ಷ ರೂ. ನೀಡಿದ್ದನ್ನು ನೋಡಲಿ ಎಂದಿದ್ದರು. -ಏಜೆನ್ಸೀಸ್
ಐಪಿಎಲ್ ರದ್ದುಗೊಂಡರೂ ಇದೆ ಚಾನ್ಸ್
ಕೋಲ್ಕತ: 13ನೇ ಆವೃತ್ತಿಯ ಐಪಿಎಲ್ ರದ್ದುಗೊಂಡರೂ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಮುಕ್ತವಾಗಿದೆ ಎಂದು ಅವರ ಬಾಲ್ಯದ ಕೋಚ್ ಕೇಶವ್ ರಂಜನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಚೆನ್ನೈಯಿಂದ ವಾಪಸಾದ ಬಳಿಕ ಅವರೊಂದಿಗೆ ಹಾಗೂ ಪಾಲಕರೊಂದಿಗೆ ಮಾತನಾಡಿದ್ದೇನೆ, ಧೋನಿ ಸದ್ಯಕ್ಕೆ ಫಿಟ್ನೆಸ್ ಕಡೆಗೆ ಗಮನ ಹರಿಸುತ್ತಿದ್ದು, ಅವರು ಸಂಪೂರ್ಣ ಸಿದ್ಧವಾಗಿದ್ದಾರೆ’ ಎಂದರು.