ಪರ್ವೀನ್​ ಹೂಡಾ ಸಂಗ್ರಹ ಚಿತ್ರ
ಕ್ರೀಡೆ

ASIAN GAMES: ಬಾಕ್ಸಿಂಗ್​ನಲ್ಲಿ 8ರ ಘಟ್ಟಕ್ಕೇರಿದ ಪರ್ವೀನ್​; ಸಾಕ್ಷಿ, ಸುಮಿತ್​ ಪರಾಭವ!

ಪರ್ವೀನ್​ ಮಹಿಳೆಯರ 65 ಕೆಜಿ ವಿಭಾಗದಲ್ಲಿ ವಾಕ್​ಓವರ್​ ಮೂಲಕ ಕ್ವಾರ್ಟರ್​ಫೈನಲ್​ಗೇರಿದ್ದರೆ, ಸಾಕ್ಷಿ ಚೌಧರಿ ಮತ್ತು ಸುಮಿತ್​ 16ರ ಘಟ್ಟದಲ್ಲೇ ಸೋತು ಹೊರಬಿದ್ದಿದ್ದಾರೆ.

ಐಚಿ-ನಗೋಯಾ: ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಭಾರತ ಗುರುವಾರ ಮಿಶ್ರಫಲ ಎದುರಿಸಿದೆ. ಪರ್ವೀನ್​ ಮಹಿಳೆಯರ 65 ಕೆಜಿ ವಿಭಾಗದಲ್ಲಿ ವಾಕ್​ಓವರ್​ ಮೂಲಕ ಕ್ವಾರ್ಟರ್​ಫೈನಲ್​ಗೇರಿದ್ದರೆ, ಸಾಕ್ಷಿ ಚೌಧರಿ ಮತ್ತು ಸುಮಿತ್​ 16ರ ಘಟ್ಟದಲ್ಲೇ ಸೋತು ಹೊರಬಿದ್ದಿದ್ದಾರೆ.

ಕಳೆದ ಆವೃತ್ತಿಯ ಏಷ್ಯಾಡ್​ನಲ್ಲಿ ಕಂಚಿನ ಪದಕ ಗೆದ್ದಿದ್ದರೂ, ಬಳಿಕ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಪದಕ ಕಳೆದುಕೊಂಡಿದ್ದ ಪರ್ವೀನ್​ ಹೂಡಾ, ಇನ್ನೊಂದು ಪಂದ್ಯ ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಅವರ ವಿರುದ್ಧ ಆಡಬೇಕಾಗಿದ್ದ ತಜಿಕಿಸ್ತಾನದ ಮಲಿಕಾ ನೊಜಿಮೋವಾ ಗಾಯದಿಂದಾಗಿ ಹಿಂದೆ ಸರಿದರು.

ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ಪದಕ ವಿಜೇತೆ ಸಾಕ್ಷಿ ಚೌಧರಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಕಜಾಕ್​ಸ್ತಾನದ ಅಲುವಾ ಬಲ್ಕಿಬೆಕೋವಾ ವಿರುದ್ಧ 2-3ರಿಂದ ಶರಣಾದರು. ಹರಿಯಾಣದ ಸುಮಿತ್​ ಪುರುಷರ 70 ಕೆಜಿ ವಿಭಾಗದ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಇರಾಕ್​ನ ಅಲ್​ ಸರೇ ಅಲಿ ಖಾಸಿಮ್​ ಎದುರಿನ ಪಂದ್ಯದ ವೇಳೆ ಗಾಯಗೊಂಡು ಹೊರಬಿದ್ದರು. ಮೊದಲ 2 ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಸುಮಿತ್​, 3ನೇ ಸುತ್ತಿನ ವೇಳೆ ಪಂಚ್​ ತಪ್ಪಿಸಲು ಯತ್ನಿಸುವಾಗ ಬಿದ್ದು ಮೊಣಕಾಲಿನ ಗಾಯಕ್ಕೊಳಗಾದರು. ಆಗ ಪಂದ್ಯ ಸ್ಥಗಿತಗೊಳಿಸಿದ ರೆಫ್ರಿ ಎದುರಾಳಿಯನ್ನು ವಿಜೇತ ಎಂದು ಘೋಷಿಸಿದರು.

ಪ್ರಣತಿ ನಾಯಕ್​

ಪ್ರಣತಿ ನಾಯಕ್​ 6ನೇ ಸ್ಥಾನಕ್ಕೆ ತೃಪ್ತಿ

ಏಷ್ಯಾಡ್​ನಲ್ಲಿ ಸ್ಪರ್ಧಿಸಿದ ಭಾರತದ ಏಕಮಾತ್ರ ಜಿಮ್ನಾಸ್ಟ್​ ಪ್ರಣತಿ ನಾಯಕ್​ ಆರ್ಟಿಸ್ಟಿಕ್​ ಜಿಮ್ನಾಸ್ಟಿಕ್ಸ್​ ಸ್ಪರ್ಧೆಯ ಮಹಿಳೆಯರ ವಾಲ್ಟ್​ ವಿಭಾಗದ ಫೈನಲ್​ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಜಿಮ್ನಾಸ್ಟ್​ಗಳ ನಡುವೆ ಗುರುವಾರ ನಡೆದ ಸ್ಪರ್ಧೆಯಲ್ಲಿ 31 ವರ್ಷದ ಪ್ರಣತಿ ಮೊದಲ 2 ಸುತ್ತುಗಳಲ್ಲಿ ತಲಾ 12.900 ಅಂಕ ಗಳಿಸಿದರು. ಜತೆಗೆ 0.20 ಬೋನಸ್​ ಅಂಕದೊಂದಿಗೆ ಒಟ್ಟು 13.100 ಅಂಕ ಗಳಿಸಿದರು. ಇದಕ್ಕೆ ಮುನ್ನ ಆಲ್ರೌಂಡ್​ ವಿಭಾಗದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅವರು, ವಾಲ್ಟ್​ ವಿಭಾಗದಲ್ಲಿ ಮಾತ್ರ ಫೈನಲ್​ಗೇರಿದ್ದರು.