ಬೆಂಗಳೂರು: ಭಾರತೀಯ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಮತ್ತೆ ಒಂದಾಗುವ ಮೂಲಕ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಮರುಜೀವ ನೀಡಲು ಬಯಸಿದ್ದು, ಇವರಿಬ್ಬರು ಜತೆಯಾಗಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿಯಾಗಿ ಹಂಚಿಕೊಂಡಿದ್ದಾರೆ.
ಪಾರುಪಳ್ಳಿ ಕಶ್ಯಪ್ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿರುವ ವಿಷಯವನ್ನು ಸೈನಾ ನೆಹ್ವಾಲ್ ಕಳೆದ ಜುಲೈ 13ರಂದು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರಕಟಿಸಿದ್ದರು. ಆದರೆ ಶನಿವಾರ ದಂಪತಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, "ಕೆಲವೊಮ್ಮೆಅಂತರವು ಕೆಲವೊಬ್ಬರ ಅನುಪಸ್ಥಿತಿಯ ಮೌಲ್ಯವನ್ನು ನಮಗೆ ತಿಳಿಸುತ್ತದೆ. ನಾವು ಮತ್ತೆ ಒಂದಾಗಲು ಪ್ರಯುತ್ನಿಸುತ್ತಿದ್ದೇವೆ' ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ ನಡುವಿನ ಬಿರುಕು ಸರಿಪಡಿಸಿಕೊಳ್ಳುವ ನಿರ್ಧಾರವನ್ನು ತಿಳಿಸಿದ್ದಾರೆ.
ಹೈದರಾಬಾದ್ನ ಪಿ. ಗೋಪಿಚಂದ್ ಅಕಾಡೆಮಿಯಲ್ಲಿ ಜತೆಯಾಗಿ ತರಬೇತಿ ಮತ್ತು ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಆಡುತ್ತ ಆಪ್ತರಾಗಿದ್ದ ಸೈನಾ&ಕಶ್ಯಪ್ 2018ರ ಡಿಸೆಂಬರ್ನಲ್ಲಿ ವಿವಾಹವಾಗಿದ್ದರು. ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ 35 ವರ್ಷದ ಸೈನಾ, ಅವಳಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸಹ ಆಗಿದ್ದಾರೆ. 2014ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತ 38 ವರ್ಷದ ಕಶ್ಯಪ್, ಕಳೆದ ವರ್ಷ ನಿವೃತ್ತಿ ಹೊಂದಿದ್ದು, ಪ್ರಸಕ್ತ ಕೋಚಿಂಗ್ನತ್ತ ಗಮನಹರಿಸಿದ್ದಾರೆ. 2012ರಲ್ಲಿ ಅರ್ಜುನ ಪ್ರಶಸ್ತಿಯೂ ಅವರಿಗೆ ಒಲಿದಿತ್ತು.