ಕ್ರೀಡೆ

ಕರ್ನಾಟಕದ ಯುವ ಫುಟ್​ಬಾಲ್​ ಆಟಗಾರ ಮೋನಿಷ್​ ರಸ್ತೆ ಅಪಘಾತಕ್ಕೆ ಬಲಿ

ಬೆಂಗಳೂರು: ರಾಜ್ಯದ ಯುವ ಫುಟ್​ಬಾಲ್​ ಆಟಗಾರ ಮೋನಿಷ್​ ಕೆ. ಶನಿವಾರ ರಾತ್ರಿ ಹೊರಮಾವಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಭಾನುವಾರ ನಿಧನ ಹೊಂದಿದರು. 28 ವರ್ಷದ ಮೋನಿಷ್​ ಬೆಂಗಳೂರು ಈಗಲ್ಸ್​ ತಂಡದ ಸೆಂಟರ್​ ಮಿಡ್​ಫೀಲ್ಡರ್​ ಆಗಿದ್ದರು. ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಮೋನಿಷ್​ ಈ ಮುನ್ನ ಪರಿಕ್ರಮ ಎಫ್​ಸಿ, ಡೆಕ್ಕನ್​ ಎಫ್​​ಸಿ, ಎಡಿಇ, ಯಂಗ್​ ಚಾಲೆಂಜರ್ಸ್​ ಎಫ್​ಸಿ ಮತ್ತು ಸಿಐಎಲ್​ ತಂಡಗಳ ಪರವಾಗಿಯೂ ಆಡಿದ್ದರು. ಪ್ರಸಕ್ತ ಬಿಡಿಎಫ್​ಎ ಎ ಡಿವಿಷನ್​ ಲೀಗ್​ ಚಾಂಪಿಯನ್​ಷಿಪ್​ನಲ್ಲಿ ಆಡುತ್ತಿದ್ದರು. ಮೋನಿಷ್​ ನಿಧನದ ಹಿನ್ನೆಲೆಯಲ್ಲಿ ಬಿಡಿಎಫ್​ಎ, ಜನವರಿ 23ರಂದು ನಿಗದಿಯಾಗಿದ್ದ ಬ್ಲಿಟ್ಜ್​ ಎಫ್​ಸಿ ಮತ್ತು ಬೆಂಗಳೂರು ಈಗಲ್ಸ್​ ನಡುವಿನ ಪಂದ್ಯವನ್ನು ಮುಂದೂಡಿದೆ.