ಕ್ರೀಡೆ

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ಗೆ ವಿಶೇಷ ಗೌರವ ನೀಡಿದ ಆಸ್ಟ್ರೇಲಿಯಾದ ಅತ್ಯಂತ ಹಳೆಯ ಕ್ರೀಡಾ ಕ್ಲಬ್

ಮೆಲ್ಬೋರ್ನ್: ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ಗೆ ಆಸ್ಟ್ರೇಲಿಯಾದ ಅತ್ಯಂತ ಹಳೆಯ ಕ್ರೀಡಾ ಕ್ಲಬ್‌ಗಳಲ್ಲಿ ಒಂದಾಗಿರುವ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಗೌರವ ಸದಸ್ಯತ್ವ ನೀಡಿದೆ. ಈ ವಿಷಯವನ್ನು ಎಂಸಿಸಿ ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದೆ.

ಒಬ್ಬ ಐಕಾನ್ ಆಟಗಾರನನ್ನು ಗೌರವಿಸಲಾಗಿದೆ. ಸಚಿನ್ ತೆಂಡುಲ್ಕರ್ ಅವರು ಕ್ರಿಕೆಟ್‌ಗೆ ನೀಡಿರುವ ಅತ್ಯುತ್ತಮ ಕೊಡುಗೆ ಹಾಗೂ ಸೇವೆಯನ್ನು ಗುರುತಿಸುವ ಸಲುವಾಗಿ ಕ್ಲಬ್‌ನ ಗೌರವ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಈ ಆಹ್ವಾನವನ್ನು ಅವರು (ಸಚಿನ್) ಸ್ವೀಕರಿಸಿದ್ದಾರೆ ಎಂದು ೋಷಿಸಲು ಸಂತೋಷವಾಗಿ ಎಂದು ಎಂಸಿಸಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಪ್ರಮುಖ ಕ್ರೀಡಾ ತಾಣ ಎನಿಸಿರುವ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನ (ಎಂಸಿಜಿ) ನಿರ್ವಹಣೆ ಹಾಗೂ ಅಭಿವೃದ್ದಿಗೊಳಿಸುವ ಜವಾಬ್ದಾರಿಯನ್ನು ಪಡೆದುಕೊಂಡಿರುವ ಎಂಸಿಸಿ ಕ್ಲಬ್ 1838ರಲ್ಲಿ ಆಸ್ತಿತ್ವಕ್ಕೆ ಬಂದಿತು.

ತೆಂಡುಲ್ಕರ್ ಅವರು ಎಂಸಿಜಿಯಲ್ಲಿ ಆಡಿರುವ ಐದು ಟೆಸ್ಟ್‌ಗಳಲ್ಲಿ 44.90ರ ಸರಾಸರಿಯಲ್ಲಿ 449 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ, ಮೂರು ಅರ್ಧಶತಕ ಸಿಡಿಸಿರುವ ದಾಖಲೆಯನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ 2012ರಲ್ಲಿ ತೆಂಡುಲ್ಕರ್ ಅವರಿಗೆ ಆಸ್ಟ್ರೇಲಿಯಾ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆಗ ಈ ಗೌರವಕ್ಕೆ ಪಾತ್ರರಾದ 2ನೇ ಭಾರತೀಯ ಎನಿಸಿದರೆ, ಪ್ರಶಸ್ತಿ ಪಡೆದ ಕೇವಲ ಮೂವರು ಕ್ರಿಕೆಟಿಗರಲ್ಲಿ ತೆಂಡುಲ್ಕರ್ ಸಹ ಒಬ್ಬರೆನಿಸಿದ್ದಾರೆ.