ಕ್ರೀಡೆ

ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತ ಅಪಾಯವಾಗಬಹುದು ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ ದಿಗ್ಗಜ ಸಚಿನ್ ತೆಂಡುಲ್ಕರ್..!

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿ ಅರ್ಧದಾರಿ ಸವೆದಿದೆ. ಏಕದಿನ ಸರಣಿಯಲ್ಲಿ ಆತಿಥೇಯ ತಂಡ ಗೆದ್ದುಕೊಂಡರೆ, ಟಿ20 ಸರಣಿ ಜಯಿಸುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಇದೀಗ ಉಭಯ ತಂಡಗಳ ನಡುವೆ ನಿರ್ಣಾಯಕ 4 ಪಂದ್ಯಗಳ ಟೆಸ್ಟ್ ಸರಣಿಗೆ ದಿನಗಣನೆ ಆರಂಭಗೊಂಡಿದೆ. ಮಹತ್ವಾಂಕ್ಷೆಯ ಸರಣಿ ಕುರಿತು ಈಗಾಗಲೇ ಭಾರತಕ್ಕೆ ಹಲವು ಎಚ್ಚರಿಕೆ ಸಂದೇಶಗಳು ಬರುತ್ತಿವೆ. ಇದೀಗ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಆ ಅಪಾಯಕಾರಿ ಆಟಗಾರ ಕುರಿತು ಎಚ್ಚರಿಕೆಯಿಂದ ಇರುವಂತೆ ಭಾರತದ ಆಟಗಾರರಿಗೆ ತಿಳಿ ಹೇಳಿದ್ದಾರೆ.

ಡಿ.17 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡದ ಮಧ್ಯ ಕ್ರಮಾಂಕದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಅತ್ಯಂತ ಅಪಾಯಕಾರಿ ಎಂದು ಸಚಿನ್ ತಿಳಿದ್ದಾರೆ. ಲಬುಶೇನ್ ಇದುವರೆಗೂ ಭಾರತದ ಎದುರು ಏಕೈಕ ಟೆಸ್ಟ್ ಪಂದ್ಯ ಆಡದಿದ್ದರೂ ಆತನೇ ಅಪಾಯಕಾರಿ ಎಂದು ಸಚಿನ್ ಎಚ್ಚರಿಸಿದ್ದಾರೆ. ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಭಾರತ ತಂಡಕ್ಕೆ ಸಂಘಟಿತ ಹೋರಾಟ ಅಗತ್ಯವಿದ್ದು, 2018-19ನೇ ಸಾಲಿನಲ್ಲಿ ತೋರಿದ ನಿರ್ವಹಣೆ ತಂಡದಿಂದ ಬರಬೇಕಿದೆ ಎಂದಿದ್ದಾರೆ.

ಲಬುಶೇನ್ ಅಲ್ಲದೆ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಕೂಡ ಭಾರತಕ್ಕೆ ಅಪಾಯಕಾರಿ ಆಗಬಲ್ಲರು ಎಂದಿದ್ದಾರೆ. ಕಳೆದ ಪ್ರವಾಸಕ್ಕೆ ಹೋಲಿಸಿದರೆ ಆಸೀಸ್ ತಂಡ ಬಲಿಷ್ಠವಾಗಿದ್ದು, ಈ ಮೂವರ ಆಗಮನದಿಂದ ಆಸೀಸ್ ಬ್ಯಾಟಿಂಗ್ ವಿಭಾಗದಲ್ಲಿ ಶಕ್ತಿಶಾಲಿಯಾಗಿದೆ ಎಂದು ಸಚಿನ್ ಹೇಳಿದ್ದಾರೆ.