ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಎಡಗೈ ಬ್ಯಾಟರ್ ವಿನೋದ್ ಕಾಂಬ್ಳಿಗೆ ಮಂಗಳವಾರ 50 ವರ್ಷದ ಸಂಭ್ರಮ. 1988ರಲ್ಲಿ ಶಾರಾದಾಶ್ರಮ ವಿದ್ಯಾಮಂದಿರ ಶಾಲಾ ತಂಡದ ಪರ ವಿಶ್ವದಾಖಲೆಯ 664 ರನ್ ಜತೆಯಾಟವಾಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನಸೆಳೆದಿದ್ದ ವಿನೋದ್ ಕಾಂಬ್ಳಿ, ಆ ಜತೆಯಾಟದಲ್ಲಿ ಸಾಥ್ ನೀಡಿದ್ದ ಸಚಿನ್ ತೆಂಡುಲ್ಕರ್‌ರ ಆಪ್ತಮಿತ್ರರೂ ಹೌದು. ಈ ಹಿನ್ನೆಲೆಯಲ್ಲಿ ಆತ್ಮೀಯ ಗೆಳೆಯನ 50ನೇ ಜನ್ಮದಿನಕ್ಕೆ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶೇಷ ಸಂದೇಶದ ಮೂಲಕ ಶುಭಾಶಯ ತಿಳಿಸಿದ್ದಾರೆ.
‘ಹ್ಯಾಪಿ ಬರ್ತ್‌ಡೇ ಕಾಂಬ್ಲಿಯಾ! ನಾವಿಬ್ಬರೂ ಮೈದಾನದ ಒಳಗೆ ಮತ್ತು ಹೊರಗೆ ಲೆಕ್ಕವಿಲ್ಲದಷ್ಟು ಸ್ಮರಣೀಯ ಕ್ಷಣಗಳನ್ನು ಜತೆಯಾಗಿ ಕಂಡಿದ್ದೇವೆ. ಅದನ್ನು ನಾನು ಎಂದೆಂದಿಗೂ ಸಂಭ್ರಮಿಸುವೆ. 50ರ ಅನುಭವ ಹೇಗಿರುತ್ತದೆ ಎಂಬುದನ್ನು ನಿನ್ನಿಂದ ತಿಳಿದುಕೊಳ್ಳಲು ಬಯಸಿರುವೆ. ಗಾಡ್ ಬ್ಲೆಸ್ ಯೂ’ ಎಂದು ಸಚಿನ್ ಟ್ವೀಟಿಸಿದ್ದು, ಕಾಂಬ್ಳಿ ಜತೆಗಿನ ಬಾಲ್ಯ ಮತ್ತು ಇತ್ತೀಚೆಗಿನ ಚಿತ್ರವನ್ನು ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಬ್ಳಿ, ‘ಥ್ಯಾಂಕ್ ಯೂ ಮಾಸ್ಟರ್. 50ರ ಅನುಭವ ಸಾಕಷ್ಟು ಎನರ್ಜೆಟಿಕ್ ಆಗಿದೆ ಮತ್ತು ಹೊಸದಾಗಿ ಜನಿಸಿದ ಮಗುವಿನಂತೆ ಭಾಸವಾಗುತ್ತಿದೆ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಸಚಿನ್ ಬೆನ್ನಲ್ಲೇ 1991ರಲ್ಲೇ ಭಾರತ ತಂಡಕ್ಕೂ ಕಾಲಿಟ್ಟಿದ್ದ ವಿನೋದ್ ಕಾಂಬ್ಳಿ, ಆರಂಭಿಕ ಯಶಸ್ಸು ಕಂಡಿದ್ದರೂ, ನಂತರದಲ್ಲಿ ಅವರ ವೃತ್ತಿಜೀವನ ನಿರೀಕ್ಷಿತ ಎತ್ತರಕ್ಕೆ ಏರಿರಲಿಲ್ಲ. ಭಾರತ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯವಾಡಿರುವ ಅವರು ಕ್ರಮವಾಗಿ 1,084 ಮತ್ತು 2,477 ರನ್ ಬಾರಿಸಿದ್ದಾರೆ. ಒಟ್ಟಾರೆ 6 ಶತಕ ಮತ್ತು 17 ಅರ್ಧಶತಕ ಬಾರಿಸಿದ್ದಾರೆ. ಅವರ ಆಪ್ತಮಿತ್ರ ಸಚಿನ್ ಭಾರತ ಪರ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳ ವರ್ಣರಂಜಿತ ವೃತ್ತಿಜೀವನ ಕಂಡಿದ್ದರು. ಜತೆಗೆ 33 ಸಾವಿರಕ್ಕೂ ಅಧಿಕ ರನ್ ಮತ್ತು 100 ಶತಕ ಬಾರಿಸಿದ್ದಾರೆ.