ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭವಾಗುವುದಕ್ಕೂ ಮುನ್ನ ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರೆಂಬ ಪ್ರಶ್ನೆಗೆ ಚುಟುಕು ವಿಶ್ವಸಮರ ಮುಗಿದ ಬಳಿಕ ಬಿಸಿಸಿಐ ಉತ್ತರ ನೀಡಿತ್ತು. ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ರನ್ನು ನೇಮಿಸುವ ಮೂಲಕ ಬಿಸಿಸಿಐ ಗೊಂದಲಗಳಿಗೆ ತೆರೆ ಎಳೆದಿತ್ತು. ಗೌತಮ್ ಗಂಭೀರ್ ನೇಮಕಕ್ಕೂ ಮುನ್ನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಮಾಜಿ ಆಟಗಾರರ ಹೆಸರು ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಆಶಿಶ್ ನೆಹ್ರಾ ಹೆಸರು ಕೂಡ ಕೇಳಿ ಬಂದಿತ್ತು.
ಪದಾರ್ಪಣೆ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ಸ್ ಮಾಡಿದ ಕೀರ್ತಿ ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರಿಗೆ ಸಲ್ಲುತ್ತದೆ. ಆಶಿಶ್ ಮಾರ್ಗದರ್ಶನದಲ್ಲಿ ತಂಡ ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇನ್ನೊಮ್ಮೆ ರನ್ನರ್ಅಪ್ ಆಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ನೆಹ್ರಾ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೋಚ್ ಹುದ್ದೆಗೆ ಆಶಿಶ್ ಅರ್ಜಿ ಸಲ್ಲಿಸಲು ನಿರಾಕರಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಈ ಕುರಿತು ಮಾತನಾಡಿರುವ ಆಶಿಶ್ ತಾವು ಅರ್ಜಿ ಸಲ್ಲಿಸದೆ ಇರುವ ಕುರಿತು ಕಾರಣವನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ನೆಹ್ರಾ, ನಾನು ಇನ್ನೂ ಕೋಚ್ ಹುದ್ದೆ ಬಗ್ಗೆ ಯೋಚಿಸಿಲ್ಲ. ನನ್ನ ಮಕ್ಕಳು ಇನ್ನೂ ಚಿಕ್ಕವರು. ಹಾಗೆ ನೋಡಿದರೆ ಗೌತಮ್ ಮಕ್ಕಳು ಕೂಡ ಚಿಕ್ಕವರು. ಅದಾಗ್ಯೂ ಪ್ರತಿಯೊಬ್ಬರೂ ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಸದ್ಯ ನಾನು ತಂಡದೊಂದಿಗೆ ದೀರ್ಘ ಪ್ರಯಾಣ ಮಾಡುವ ಮನಸ್ಥಿತಿಯಲಿಲ್ಲ ಎಂದು ಆಶಿಶ್ ನೆಹ್ರಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸದಿರುವ ಕುರಿತು ಕಾರಣವನ್ನು ತಿಳಿಸಿದ್ದಾರೆ.
ಇನ್ನು ಆಶಿಶ್ ನೆಹ್ರಾ ಅವರ ಕೋಚಿಂಗ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ನೆಹ್ರಾ ಐಪಿಎಲ್ನ ಅತ್ಯಂತ ಯಶಸ್ವಿ ಕೋಚ್ಗಳಲ್ಲಿ ಒಬ್ಬರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಒಮ್ಮೆ ಚಾಂಪಿಯನ್ಸ್ ಇನ್ನೊಮ್ಮೆ ರನ್ನರ್ಅಪ್ ಆಗಿದೆ. ಇದಲ್ಲದೆ 18ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದ್ದು, ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದಿವೆ.