ಕ್ರೀಡೆ

ದಕ್ಷಿಣ ಆಫ್ರಿಕಾ ನಾಯಕತ್ವ ತ್ಯಜಿಸಿದ ಪ್ಲೆಸಿಸ್, ಭವಿಷ್ಯದ ನಾಯಕನ ಅಗತ್ಯವಿದೆ ಎಂದ ಸ್ಟಾರ್ | ಆಟಗಾರನಾಗಿ ಮುಂದುವರಿಕೆ

ಪ್ರಿಟೋರಿಯಾ: ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್, ತಕ್ಷಣದಿಂದಲೇ ಜಾರಿಯಾಗುವಂತೆ ತಂಡದ ಮೂರೂ ಮಾದರಿಯ ಕ್ರಿಕೆಟ್​ನ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ‘ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂದಿನ ಯುಗದ ನಾಯಕನ ಅಗತ್ಯವಿರುವ ಕಾರಣ ಈ ನಿರ್ಧಾರ ಮಾಡಿದ್ದೇನೆ’ ಎಂದು 35 ವರ್ಷದ ಪ್ಲೆಸಿಸ್ ತಿಳಿಸಿದ್ದಾರೆ. ಕ್ವಿಂಟನ್ ಡಿ ಕಾಕ್​ರ ನೇತೃತ್ವದಲ್ಲಿ ತಂಡದಲ್ಲಿ ಆಂತರಿಕವಾಗಿಯೇ ಮುಂದಿನ ಯುಗದ ನಾಯಕರು ಬೆಳೆಯಬೇಕು. ಇದಕ್ಕೆ ಸಹಾಯ ಮಾಡುವ ಸಲುವಾಗಿ ನಾನು ಒಂದು ಹೆಜ್ಜೆ ಹಿಂದೆ ಇಟ್ಟಿದ್ದೇನೆ ಎಂದು ಸೋಮವಾರ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳು ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಸ್ತುತ ಬೆನ್ನುಬೆನ್ನಿಗೆ ಸರಣಿ ಆಡುತ್ತಿದೆ. ಇದರ ಬೆನ್ನಲ್ಲಿಯೇ ಪ್ಲೆಸಿಸ್​ರ ನಿರ್ಧಾರ ವಿಶ್ವಕಪ್​ಗೆ ಸಿದ್ಧತೆ ನಡೆಸುತ್ತಿರುವ ತಂಡದ ಅಭಿಯಾನಕ್ಕೆ ಏಟು ನೀಡುವ ಸಾಧ್ಯತೆ ಇದೆ. ಅನುಭವಿ ಆಟಗಾರನಾಗಿ ಹಾಗೂ ಬ್ಯಾಟ್ಸ್​ಮನ್ ಆಗಿ ತಂಡದ ಹೊಸ ನಾಯಕತ್ವಕ್ಕೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದಾಗಿ ಪ್ಲೆಸಿಸ್ ತಿಳಿಸಿದ್ದಾರೆ. ಡಿ ವಿಲಿಯರ್ಸ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, 2016ರ ಡಿಸೆಂಬರ್​ನಿಂದ ತಂಡದ ಮೂರೂ ಮಾದರಿಯ ಕ್ರಿಕೆಟ್ ತಂಡಕ್ಕೆ ಪ್ಲೆಸಿಸ್ ನಾಯಕರಾಗಿದ್ದರು.

ಹಲವು ದಾಖಲೆಗಳ ನಾಯಕ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ತವರು ಹಾಗೂ ಎದುರಾಳಿಯ ತವರಿನಲ್ಲಿ ಸರಣಿ ಗೆಲುವು ತಂದ ಏಕೈಕ ದಕ್ಷಿಣ ಆಫ್ರಿಕಾ ನಾಯಕ ಎನ್ನುವ ದಾಖಲೆ ಪ್ಲೆಸಿಸ್ ಅವರದ್ದಾಗಿದೆ. ಆದರೆ, 2019ರ ಏಕದಿನ ವಿಶ್ವಕಪ್​ನಲ್ಲಿ ತಂಡ ಸೆಮಿಫೈನಲ್​ಗೇರಲು ವಿಫಲವಾಗಿದ್ದ ದಿನದಿಂದ ಪ್ಲೆಸಿಸ್​ರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಒತ್ತಡ ಕೇಳಿ ಬರುತ್ತಿತ್ತು. ಅದರ ಬೆನ್ನಲ್ಲಿಯೇ ಭಾರತ ಪ್ರವಾಸದ ಟೆಸ್ಟ್ ಸರಣಿಯಲ್ಲಿ 0-3 ವೈಟ್​ವಾಷ್ ಹಾಗೂ ಇಂಗ್ಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ 1-3 ಸರಣಿ ಸೋಲು ಪ್ಲೆಸಿಸ್ ನಿರ್ಗಮನಕ್ಕೆ ಕಾರಣವಾಗಿದೆ.

ಟೆಸ್ಟ್​ನಲ್ಲಿ ನಾಯಕತ್ವ ವೈಫಲ್ಯ: ಪ್ಲೆಸಿಸ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್​ನಲ್ಲಿ ದಯನೀಯ ವೈಫಲ್ಯ ಕಂಡಿತ್ತು. ಪ್ಲೆಸಿಸ್ ನಾಯಕರಾಗಿ ತಂಡ ಮುನ್ನಡೆಸಿದ 36 ಪಂದ್ಯಗಳಲ್ಲಿ 18 ಗೆಲುವು ಹಾಗೂ 15 ಸೋಲುಗಳನ್ನು ಕಂಡಿದ್ದರು. ಪ್ರಮುಖವಾಗಿ ತವರಿನಲ್ಲೇ ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದು ದೊಡ್ಡ ಹಿನ್ನಡೆಯಾಗಿದೆ. 39 ಏಕದಿನಗಳಲ್ಲಿ 28 ಗೆಲುವು ಕಂಡಿದ್ದರೆ, 37 ಟಿ20ಯಲ್ಲಿ 23ರಲ್ಲಿ ಗೆಲುವು ಸಾಧಿಸಿದ್ದರು. (ಏಜೆನ್ಸೀಸ್)