ಕ್ರೀಡೆ

ಐಪಿಎಲ್​ ಸರಣಿ ವೇಳೆ ಬಾಂಬ್​ ಬ್ಲಾಸ್ಟ್​ ಪ್ಲ್ಯಾನ್​! ಪೊಲೀಸರ ಎದುರು ಉಗ್ರ ಬಿಚ್ಚಿಟ್ಟಿದ್ದಾನೆ ಭಯಾನಕ ಸತ್ಯ

ಮುಂಬೈ: ಭಾರತದ ವಿವಿಧ ಪ್ರದೇಶಗಳ ಮೇಲೆ ಉಗ್ರರ ಕಣ್ಣು ಸದಾ ಇದ್ದೇ ಇದೆ. ಅದರಲ್ಲಿಯೂ ವಿಶೇಷ ಸಂದರ್ಭದಲ್ಲಿ ಬಾಂಬ್​ ಬ್ಲಾಸ್ಟ್​ ಮಾಡಲು ಯೋಜನೆ ರೂಪಿಸಲಾಗುತ್ತದೆ. ಇದೀಗ ಅಂಥದ್ದೇ ಒಂದು ಭಯಾನಕ ಸತ್ಯವನ್ನು ಉಗ್ರನೊಬ್ಬ ಬಾಯಿ ಬಿಟ್ಟಿದ್ದಾನೆ.

ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನೇನು ಎರಡೇ ದಿನ ಬಾಕಿಯಿದೆ. ಮಾರ್ಚ್ 26 ರಿಂದ ಮೇ 22ರವರೆಗೆ ಇದು ನಡೆಯಲಿದ್ದು, ಇದರ ಮೇಲೆ ಉಗ್ರರ ಕಣ್ಣು ಬಿದ್ದಿರುವ ಅಂಶ ಇದೀಗ ಬಹಿರಂಗಗೊಂಡಿದೆ. ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ಐಪಿಎಲ್​ ನಡೆಯಲಿದ್ದು, ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಈ ಕುರಿತು ಬಂಧನಕ್ಕೆ ಒಳಗಾಗಿರುವ ಉಗ್ರನೊಬ್ಬ ಬಾಯಿ ಬಿಟ್ಟಿರುವುದಾಗಿ ಭಯೋತ್ಪಾದನಾ ನಿಗ್ರಹ ದಳ ಹೇಳಿದೆ. ಈತನ ಪ್ರಕಾರ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್, ನಾರಿಮನ್ ಪಾಯಿಂಟ್ ಹಾಗೂ ಆಟಗಾರರ ಹೋಟೆಲ್ ಸ್ಟೇಡಿಯಂ ಸುತ್ತಮುತ್ತಲ ಪ್ರದೇಶಗಳ ಮಾಹಿತಿಯನ್ನು ಸ್ಫೋಟಗೊಳಿಸುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ಆತ ಹೇಳಿದ್ದಾನೆ.

ಈ ಹಿನ್ನೆಲೆಯಲ್ಲಿ ಐಪಿಎಲ್ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವಿಕ್ ರೆಸ್ಪಾನ್ಸ್ ಟೀಮ್, ಬಾಂಬ್ ಸ್ಕ್ವಾಡ್, ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

.