ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಅವರು ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದರು. ಅನಿರೀಕ್ಷಿತ ಬಳೆವಣಿಗೆಯಲ್ಲಿ ಅವರು ಅನರ್ಹಗೊಂಡ ಪರಿಣಾಮ ಪದಕದ ಆಸೆ ನುಚ್ಚು ನೂರಾಗಿದ್ದು, ಇದರ ಬೆನ್ನಲ್ಲೇ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (CAS) ಮೊರೆ ಹೋಗಿದ್ದರು.
ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ 100 ಗ್ರಾಮ್ ಹೆಚ್ಚು ದೇಹತೂಕವಿದ್ದ ಕಾರಣಕ್ಕೆ ವಿನೇಶ್ ಫೋಗಟ್ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದರು. ಅವರು ಫೈನಲ್ ತಲುಪಿದ ಕಾರಣಕ್ಕಾಗಿ ಬೆಳ್ಳಿ ಪದಕ ನೀಡಬೇಕು ಎಂದು ಸಿಎಸ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ಪ್ರಾಧಿಕಾರವು ವಿನೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿ ಅವರು ಕಾಲಿ ಕೈಯಲ್ಲಿ ಸ್ವದೇಶಕ್ಕೆ ಹಿಂತಿರುಗಿದ್ದರು. ಇನ್ನೂ ವಿನೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಲು ಕಾರಣವನ್ನು ಸಿಎಎಸ್ ನೀಡಿದ್ದು, ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದೆ.
ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ತೂಕ ಪರೀಕ್ಷೆಯನ್ನು ನಡೆಸುವುದು ನಿಯಮ. ಇದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗತ್ ನಿಗದಿತ ತೂಕ 50.100 ಕೆಜಿಗೆ ಹೆಚ್ಚಾಗಿತ್ತು. ನಿಯಮದ ಪ್ರಕಾರ ವಿನೇಶ್ ಫೋಗಟ್ ತೂಕ 50 ಕೆಜಿ ಒಳಗಿರಬೇಕು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳವಾಗಿದೆ. ತೂಕ ಹೆಚ್ಚಳವಾಗಿರುವ ಕುರಿತು ಯಾವುದೇ ತಕರಾರು ಇಲ್ಲ. ಇಲ್ಲಿ ನಿಯಮ ಉಲ್ಲಂಘನೆಯಾಗಿದೆ. ತೂಕದ ಮಿತಿಯಲ್ಲಿರುವುದು ಕ್ರೀಡಾಪಟು ಜವಾಬ್ದಾರಿಯಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ವಿನೇಶ್ ದೇಹತೂಕದಲ್ಲಿ 100 ಗ್ರಾಂ ಹೆಚ್ಚು ಇರುವುದರ ಸಾಕ್ಷ್ಯಾಧಾರಗಳು ಇದ್ದವು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅವುಗಳನ್ನೂ ಪರಿಶೀಲಿಸಲಾಗಿದೆ. ಅವರ ಪ್ರಕರಣದಲ್ಲಿ ದಾಖಲಾಗಿರುವ 100 ಗ್ರಾಂ ಸಣ್ಣ ಪ್ರಮಾಣವೆನಿಸಿದರೂ ನಿಗದಿಗಿಂತ ಹೆಚ್ಚುವರಿಯಾಗಿದೆ. ನೀರಿನ ಸೇವನೆ ಮತ್ತು ನೀರಿನ ಧಾರಣದ ಕಾರಣಗಳಿರಬಹುದು. ಅದರಲ್ಲೂ ಋತುಚಕ್ರದ ಪೂರ್ವದ ಹಂತದಲ್ಲಿ ಆಗಿರಬಹುದು. ಕ್ರೀಡಾಪಟುಗಳಿಗೆ ಸಮಸ್ಯೆ ಏನೆಂದರೆ, ತೂಕದ ಮಿತಿಗೆ ಸಂಬಂಧಿಸಿದಂತೆ ಎಲ್ಲಾ ಕ್ರೀಡಾಪಟುಗಳಿಗೆ ನಿಯಮ ಒಂದೇ ಆಗಿರುತ್ತದೆ. ಈ ವಿಚಾರವಾಗಿ ನಾವು ಯಾವುದೇ ಸಹಿಷ್ಣುತೆಯನ್ನು ಹೊಂದಿಲ್ಲ. ನಿಗದಿಂತ ತೂಕಕ್ಕಿಂತ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ಅಥ್ಲೀಟ್ಗೆ ಬಿಟ್ಟ ವಿಚಾರ.
ಕ್ರೀಡಾಪಟು ಫೈನಲ್ ಸುತ್ತು ಆಡಿದ ಬಳಿಕ ಸಲ್ಲಿಸಿರುವ ಮನವಿ ಇದಲ್ಲ. ಕಾರಣ ಕ್ರೀಡಾಪಟು ಫೈನಲ್ ಸುತ್ತಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ಪದಕ ಹಂಚುವಿಕೆ ಮನವಿ ಅಪ್ರಸ್ತುತ. ಈ ಕುರಿತು ಅಂತಾರಾಷ್ಟ್ರೀಯ ಸಮಿತಿ ಪ್ರಕಟಿಸಿದ ನಿರ್ಧಾರ ಸರಿಯಾಗಿದೆ ಎಂದು ಎಂದು ಕ್ರೀಡಾ ಮಧ್ಯಸ್ಥಿಕೆ ಪ್ರಾಧಿಕಾರ (CAS) ತನ್ನ 24 ಪುಟಗಳ ತೀರ್ಪಿನಲ್ಲಿ ಘಟನೆಯ ವಿವರ, ಮನವಿ ಹಾಗೂ ಕ್ರೀಡಾ ನಿಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.
ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲ. ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು. ವಿನೇಶ್ ಅವರು 2016ರ ರಿಯೋ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. 2016ರ ರಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಮೊಣಕಾಲಿನ ಗಾಯದಿಂದಾಗಿ ಅವರ ಪದಕದ ನಿರೀಕ್ಷೆಯು ಭಗ್ನಗೊಂಡಿತು. ಇದರ ನಂತರ, ಅವರು 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸೋತಿದ್ದರು. ಈಗ 2024ರಲ್ಲಿ ಅವರು ಅಧಿಕ ತೂಕದ ಕಾರಣದಿಂದ ಹೊರಬಿದಿದ್ದರು.