ಕ್ರೀಡೆ

ಮೊಣಕಾಲು ಗಾಯದಿಂದ ಏಕದಿನ ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾ ಬ್ಯಾಟರ್

ಲಂಡನ್: ಇಂಗ್ಲೆಂಡ್‌ನ ದೇಶೀಯ ಏಕದಿನ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ ಭಾರತ ಯುವ ಬ್ಯಾಟರ್ ಪೃಥ್ವಿ ಷಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಮೊದಲ ಬಾರಿಗೆ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಕಣಕ್ಕಿಳಿದಿರುವ 23 ವರ್ಷದ ಪೃಥ್ವಿ ಷಾ, ಭಾನುವಾರ ನಡೆದ ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವಾಗ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, ಸ್ಕ್ಯಾನಿಂಗ್ ನಡೆಸಿದ ಬಳಿಕ ಗಾಯದ ಸ್ವರೂಪ ಗಂಭೀರವಾಗಿದೆ ಎಂದು ನಾರ್ಥಾಂಪ್ಟನ್‌ಶೈರ್ ತಂಡ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಬಿಸಿಸಿಐ ವೈದ್ಯಕೀಯ ತಂಡ ಗಾಯದ ಬಗ್ಗೆ ಗಮನಹರಿಸಲಿದೆ ಎನ್ನಲಾಗಿದೆ.

ಪೃಥ್ವಿ ಷಾ ಟೂರ್ನಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಂದು ದ್ವಿಶತಕ, ಶತಕ ಸಹಿತ ಒಟ್ಟು 429 ರನ್ ಕಲೆಹಾಕಿದ್ದರು. ಡರ್ಹಾಮ್ ವಿರುದ್ಧ ಪೃಥ್ವಿ ಷಾ ಸಿಡಿಸಿದ 76 ಎಸೆತದ ಅಜೇಯ 125 ರನ್‌ಗಳಿಂದ ನಾರ್ಥಾಂಪ್ಟನ್‌ಶೈರ್ ತಂಡ ಆರು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಅಲ್ಪಾವಧಿಯಲ್ಲಿ ಪೃಥ್ವಿ ಷಾ ಅಂಗಣದಲ್ಲದೇ ಡ್ರೆಸ್ಸಿಂಗ್ ರೂಮ್‌ನಲ್ಲೂ ಉತ್ತಮ ಪ್ರಭಾವ ಬೀರಿದ್ದರು. ಅವನಿಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಲು ಯಾರೂ ಬಯಸಲಿಲ್ಲ. ಪೃಥ್ವಿ ಷಾ ಅಂತಹ ಆಟಗಾರರನ್ನು ಕೈ ಬಿಡಲು ನಿರಾಸೆಯಾಗಿದೆ ಎಂದು ಕೋಚ್ ಸ್ಯಾಡ್ಲರ್ ಬೇಸರಿಸಿದ್ದಾರೆ.

ಕಳೆದ ವಾರ ಸಾಮರ್ ಸೆಟ್ ವಿರುದ್ಧ 153 ಎಸೆತಗಳಲ್ಲಿ 244 ರನ್‌ಗಳಿಸುವ ಮೂಲಕ ಮುಂಬೈ ಬ್ಯಾಟರ್ ಪೃಥ್ವಿ ಷಾ ಾರ್ಮ್‌ಗೆ ಮರಳಿದ್ದರು. ನಾರ್ಥಾಂಪ್ಟನ್‌ಶೈರ್ ಈ ಪಂದ್ಯದಲ್ಲಿ 87 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು.