ಕ್ರೀಡೆ

4 ಲಕ್ಷ ರೂ. ಸಾಕಾಗುತ್ತಿಲ್ಲ, ಮಾಸಿಕ 10 ಲಕ್ಷ ರೂ. ಜೀವನಾಂಶ ಬೇಕು: ಸುಪ್ರೀಂ ಕೋರ್ಟ್​ಗೆ ಕ್ರಿಕೆಟಿಗ ಶಮಿ ಪತ್ನಿ ಮೊರೆ

ನವದೆಹಲಿ: ಭಾರತೀಯ ಕ್ರಿಕೆಟಿಗ ಮೊಹಮದ್​ ಶಮಿ ಅವರ ಪತ್ನಿ ಹಸಿನಾ ಜಹಾನ್​, ಮಾಸಿಕ 10 ಲಕ್ಷ ರೂ. ಜೀವನಾಂಶ ಬೇಕೆಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಶಮಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ಶುಕ್ರವಾರ ನೋಟಿಸ್​ ಜಾರಿ ಮಾಡಿದ್ದು, 4 ವಾರದೊಳಗೆ ಇದಕ್ಕೆ ಉತ್ತರ ಸಲ್ಲಿಸಬೇಕಾಗಿದೆ.

ಹಸಿನಾ ಮತ್ತು ಪುತ್ರಿಗೆ ಮಾಸಿಕ 4 ಲಕ್ಷ ರೂ. ಜೀವನಾಂಶ ನೀಡಬೇಕೆಂಬ ಕಲ್ಕತ್ತ ಹೈಕೋರ್ಟ್​ ಆದೇಶವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಈ ಪೈಕಿ 1.5 ಲಕ್ಷ ರೂ. ಹಸಿನಾಗೆ ಮತ್ತು 2.50 ಲಕ್ಷ ರೂ. ಪುತ್ರಿಗೆ ನೀಡಬೇಕಾಗಿತ್ತು. ಆದರೆ ಈ 4 ಲಕ್ಷ ರೂ. ಜೀವನಾಂಶ ಸಾಕಾಗುತ್ತಿಲ್ಲ. ಇದನ್ನು 10 ಲಕ್ಷ ರೂ.ಗೆ (ಹಸಿನಾಗೆ 7 ಲಕ್ಷ, ಪುತ್ರಿಗೆ 3 ಲಕ್ಷ ರೂ.) ಏರಿಸಬೇಕೆಂದು ಮೇಲ್ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.

ಡಿಸೆಂಬರ್​ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಶಮಿ&ಹಸಿನಾ 2014ರ ಏಪ್ರಿಲ್​ನಲ್ಲಿ ವಿವಾಹವಾಗಿದ್ದರು ಮತ್ತು 2015ರ ಜುಲೈನಲ್ಲಿ ಪುತ್ರಿ ಜನಿಸಿದ್ದಳು. ಆದರೆ 2018ರಲ್ಲಿ ಹಸಿನಾ, ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿ ದೂರವಾಗಿದ್ದರು.