ಕ್ರೀಡೆ

ಆರ್​ಸಿಬಿಗೆ ಇಂದು ಆರ್​ಆರ್​ ಸವಾಲು; ತವರಿನಲ್ಲೂ ಗೆಲುವಿನ ಧ್ವಜ ನೆಡುವುದೇ ಪಾಟೀದಾರ್​ ಪಡೆ?

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಐಪಿಎಲ್​ 18ನೇ ಆವೃತ್ತಿಯಲ್ಲಿ ಈಗಾಗಲೆ ಈಡನ್​, ಚೆಪಾಕ್​, ವಾಂಖೆಡೆ, ಜೈಪುರ ಮತ್ತು ಮುಲ್ಲನ್​ಪುರದಲ್ಲಿ ಗೆಲುವಿನ ಧ್ವಜ ನೆಟ್ಟು ಬೀಗಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ, ತವರಿನಲ್ಲಿ ಇನ್ನೂ ಗೆಲುವು ಕಾಣದ ನೋವು ಕಾಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್​ ವಿರುದ್ಧದ ತನ್ನ 9ನೇ ಲೀಗ್​ ಪಂದ್ಯ ಮತ್ತು ತವರಿನ 4ನೇ ಪಂದ್ಯದಲ್ಲಿ ಈ ಕೊರತೆಯನ್ನು ನೀಗಿಸಿಕೊಳ್ಳಲು ರಜತ್​ ಪಾಟೀದಾರ್​ ಬಳಗ ಹೋರಾಡಲಿದೆ. ಸತತ 4 ಸೋಲಿನೊಂದಿಗೆ ತಿಣುಕಾಡುತ್ತಿರುವ ರಾಜಸ್ಥಾನ ರಾಯಲ್ಸ್​ ಎದುರು ತವರಿನಲ್ಲೂ ಗೆಲುವಿನ ಧ್ವಜ ನೆಡುವ ಅಪೂರ್ವ ಅವಕಾಶ ಆರ್​ಸಿಬಿ ಮುಂದಿದೆ. ಆದರೆ, ಎದುರಾಳಿ ತಂಡಕ್ಕೆ ಸ್ಥಳಿಯ ದಿಗ್ಗಜ ರಾಹುಲ್​ ದ್ರಾವಿಡ್​ ಕೋಚ್​ ಆಗಿರುವುದರಿಂದ ಆರ್​ಸಿಬಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈಗಾಗಲೆ ಕೆಎಲ್​ ರಾಹುಲ್​ ಆರ್​ಸಿಬಿ ಎದುರು ಅಬ್ಬರಿಸಿ "ಇದು ನನ್ನ ಮೈದಾನ' ಎಂದು ಸಾರಿರುವುದರಿಂದ ದ್ರಾವಿಡ್​ ಬಳಗದ ಎದುರು ಆರ್​ಸಿಬಿಗೆ ಮತ್ತೆ ಸತ್ವಪರೀೆ ಎದುರಾಗುವ ನಿರೀಕ್ಷೆಯೂ ಇದೆ.

ಆರ್​ಸಿಬಿ ತವರಿನ ಮೊದಲ 3 ಪಂದ್ಯಗಳಲ್ಲೂ ಪ್ರಮುಖವಾಗಿ ಹಿನ್ನಡೆಯಾಗಿದ್ದು ಟಾಸ್​ ಸೋಲು ಮತ್ತು ಬ್ಯಾಟಿಂಗ್​ ವಿಭಾಗದ ವೈಫಲ್ಯ. ತವರಿನ ನಾಲ್ಕನೇ ಪಂದ್ಯದಲ್ಲಿ ಇವೆರಡು ಆರ್​ಸಿಬಿಗೆ ವರದಾನವಾದರೆ ಗೆಲುವಿನ ಲಯವನ್ನು ತವರಿನಲ್ಲೂ ಮುಂದುವರಿಸುವುದು ಕಷ್ಟವಲ್ಲ. ತವರಿನಾಚೆ ಅಬ್ಬರಿಸುತ್ತಿರುವ ಆರ್​ಸಿಬಿ, ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ಅನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತ ಬಂದಿದೆ. ನಿಧಾನಗತಿಯ ಪಿಚ್​ನಲ್ಲಿ ಸಮಯೋಚಿತ ಆಟವಾಡುವ ಕಲೆಯನ್ನು ಆರ್​ಸಿಬಿ ಬ್ಯಾಟರ್​ಗಳು ಕರಗತ ಮಾಡಿಕೊಳ್ಳಬೇಕಾಗಿದೆ.

ತವರಿನಾಚೆ ಆರ್​ಸಿಬಿ ಬ್ಯಾಟರ್​ಗಳು ಪ್ರತಿ ಓವರ್​ಗೆ 9-10 ರನ್​ ಕಸಿದಿದ್ದಾರೆ. ಆದರೆ ತವರಿನಲ್ಲಿ ಈ ಗಳಿಕೆ 7&8 ರನ್​ಗಳಿಗೆ ಕುಸಿದಿದೆ. ವಿರಾಟ್​ ಕೊಹ್ಲಿ ಕೂಡ ಬೆಂಗಳೂರಿನ ಮೊದಲ 3 ಪಂದ್ಯಗಳಲ್ಲಿ 22 ರನ್​ ಗಳಿಸಿದ್ದೇ ಗರಿಷ್ಠವೆನಿಸಿದೆ. ಜತೆಗೆ ಕನ್ನಡಿಗ ದೇವದತ್​ ಪಡಿಕ್ಕಲ್​ ಕೂಡ ತವರಿನ ಮೈದಾನದಲ್ಲಿ ಮಿಂಚಬೇಕಿದೆ. ಫಿಲ್​ ಸಾಲ್ಟ್​ ಮತ್ತೊಮ್ಮೆ ಪವರ್​ಪ್ಲೇನಲ್ಲಿ ಅಬ್ಬರಿಸಬೇಕಿದೆ. ರಜತ್​ ಪಾಟೀದಾರ್​, ಜಿತೇಶ್​ ಶರ್ಮರಿಂದಲೂ ಉಪಯುಕ್ತ ಆಟ ನಿರೀಸಲಾಗುತ್ತಿದೆ. ಕಳೆದ ಪಂದ್ಯದಲ್ಲಿ ಲಿವಿಂಗ್​ಸ್ಟೋನ್​ ಬದಲಿಗೆ ಅವಕಾಶ ಪಡೆದ ರೊಮಾರಿಯೊ ಶೆರ್ಡ್​ ಸ್ಥಾನ ಉಳಿಸಿಕೊಳ್ಳುವ ನಿರೀೆ ಇದೆ. ಸ್ಲಾಗ್​ ಓವರ್​ಗಳಲ್ಲಿ ಆರ್​ಸಿಬಿಗೆ ಟಿಮ್​ ಡೇವಿಡ್​ ಬಲವಿದೆ. ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಗೆದ್ದ ವಿಶ್ವಾಸವೂ ಆರ್​ಸಿಬಿ ತಂಡಕ್ಕಿದೆ.

ಒತ್ತಡದಲ್ಲಿ ರಾಜಸ್ಥಾನ

ನಾಯಕ ಸಂಜು ಸ್ಯಾಮ್ಸನ್​ ಗಾಯದಿಂದಾಗಿ ಈ ಪಂದ್ಯವನ್ನೂ ತಪ್ಪಿಸಿಕೊಳ್ಳಲಿದ್ದು, ಮತ್ತೊಮ್ಮೆ ರಿಯಾನ್​ ಪರಾಗ್​ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸತತ 4 ಸೋಲಿನ ಸರಪಳಿ ಮುರಿಯುವ ಮೂಲಕ ಪ್ಲೇಆ್​ ಆಸೆ ಜೀವಂತವಿಡಲು ಆರ್​ಆರ್​ಗೆ ಗೆಲುವಿನ ಅಗತ್ಯವಿದೆ. ಯಶಸ್ವಿ ಜೈಸ್ವಾಲ್​, ನಿತೀಶ್​ ರಾನಾ, ಶಿಮ್ರೊನ್​ ಹೆಟ್ಮೆಯರ್​ ಇತ್ತೀಚೆಗೆ ಲಯಕ್ಕೆ ಮರಳಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆದಿರುವ 14 ವರ್ಷದ ಬ್ಯಾಟರ್​ ವೈಭವ್​ ಸೂರ್ಯವಂಶಿ ತಂಡಕ್ಕೆ ಹೊಸ ಹುರುಪು ತುಂಬಿದ್ದಾರೆ. ಬೌಲಿಂಗ್​ನಲ್ಲಿ ಜೋ್ರಾ ಆರ್ಚರ್​, ವಾನಿಂದು ಹಸರಂಗಗೆ ಇತರರಿಂದ ಸಮರ್ಥ ಬೆಂಬಲ ಸಿಗಬೇಕಿದೆ.

ಪ್ಲೇಆಫ್​ ಲೆಕ್ಕಾಚಾರ...

ಆರ್​ಸಿಬಿ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಜಯ, 3 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಆರ್​ಸಿಬಿಗೆ ಇನ್ನೂ 6 ಲೀಗ್​ ಪಂದ್ಯಗಳಿದ್ದು, ಈ ಪೈಕಿ 4 ಪಂದ್ಯ ತವರಿನಲ್ಲೇ ನಡೆಯಲಿವೆ. ಪ್ಲೇಆಫ್​ಗೇರಲು ಇನ್ನೂ ಕನಿಷ್ಠ 3 ಜಯ ಬೇಕಿದ್ದು, ತವರಿನಲ್ಲೂ ಗೆಲುವಿನ ಲಯ ಕಂಡುಕೊಂಡರೆ ಹಾದಿ ಸುಗಮವಾಗಲಿದೆ. ಕೊನೇ 6 ಪಂದ್ಯಗಳಲ್ಲಿ ಆರ್​ಆರ್​, ಡಿಸಿ, ಸಿಎಸ್​ಕೆ, ಎಲ್​ಎಸ್​ಜಿ, ಎಸ್​ಆರ್​ಎಚ್​, ಕೆಕೆಆರ್​ ಎದುರು ಆಡಲಿದೆ. ಮತ್ತೊಂದೆಡೆ ರಾಜಸ್ಥಾನ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 6ರಲ್ಲಿ ಸೋತಿದೆ. ಪ್ಲೇಆಫ್​ಗೇರಲು ರಾಜಸ್ಥಾನ ಉಳಿದ 6 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ. ಇನ್ನೊಂದು ಪಂದ್ಯ ಸೋತರೂ ಆರ್​ಆರ್​ ಪ್ಲೇಆಫ್​​ ರೇಸ್​ನಿಂದ ಬಹುತೇಕ ಹೊರಬೀಳಲಿದೆ. ಕೊನೇ 6 ಪಂದ್ಯಗಳಲ್ಲಿ ಆರ್​ಸಿಬಿ, ಜಿಟಿ, ಎಂಐ, ಕೆಕೆಆರ್​, ಸಿಎಸ್​ಕೆ ಮತ್ತು ಪಿಬಿಕೆಎಸ್​ ವಿರುದ್ಧ ಆಡಲಿದೆ.

ತವರಲ್ಲಿ ಕೈಕೊಟ್ಟಿರುವ ಸ್ಪಿನ್ನರ್ಸ್​

ಆರ್​ಸಿಬಿ ತಂಡಕ್ಕೆ ತವರಿನಲ್ಲಿ ಸ್ಪಿನ್ನರ್​ಗಳ ವೈಲ್ಯವೇ ಪ್ರಮುಖ ಹಿನ್ನಡೆ ಎನಿಸಿದೆ. ತವರಿನಿಂದ ಹೊರಗೆ 15 ವಿಕೆಟ್​ ಕಬಳಿಸಿರುವ ಆರ್​ಸಿಬಿ ಸ್ಪಿನ್ನರ್​ಗಳು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೊದಲ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್​ ಕಬಳಿಸಿದ್ದು, ಪ್ರತಿ ಓವರ್​ಗೆ 9.6 ರನ್​ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ವೇಗಿಗಳಾದ ಹ್ಯಾಸಲ್​ವುಡ್​, ಭುವನೇಶ್ವರ್​ ಜತೆಗೆ ಈ ಬಾರಿ ಆರ್​ಸಿಬಿ ಸ್ಪಿನ್ನರ್​ಗಳೂ ಉತ್ತಮ ನಿರ್ವಹಣೆ ತೋರಬೇಕಾಗಿದೆ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ಕಳೆದ ಕೆಲ ಆವೃತ್ತಿಗಳಲ್ಲಿ ಬ್ಯಾಟಿಂಗ್​ ಸ್ನೇಹಿಯಾಗಿ ರನ್​ಮಳೆಗೆ ಸಾಯಾಗುತಿತ್ತು. ಆದರೆ ಈ ಬಾರಿ ಮೊದಲ 3 ಪಂದ್ಯಗಳಲ್ಲೂ 180 ಪ್ಲಸ್​ ಮೊತ್ತ ದಾಖಲಾಗಿಲ್ಲ. ಮಳೆಯಿಂದಾಗಿ ಕಳೆದ ಪಂದ್ಯದ ವೇಳೆ ಪಿಚ್​ ಸಂಪೂರ್ಣ ಬೌಲಿಂಗ್​ ಸ್ನೇಹಿಯಾಗಿತ್ತು. ಆದರೆ ಉದ್ಯಾನನಗರಿಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗಿಲ್ಲ. ಹೀಗಾಗಿ ಈ ಬಾರಿ ಪಿಚ್​ ಬ್ಯಾಟಿಂಗ್​ಗೂ ಸಹಕಾರ ನೀಡುವ ನಿರೀಕ್ಷೆ ಇದೆ. ಎದುರಾಳಿ ರಾಜಸ್ಥಾನ ಪಾಳಯದಲ್ಲಿ ಸ್ಥಳಿಯ ತಾರೆ ರಾಹುಲ್​ ದ್ರಾವಿಡ್​ ಕೋಚ್​ ಆಗಿದ್ದು, ಇಲ್ಲಿನ ಪಿಚ್​ ಬಗ್ಗೆ ಅವರಿಗೂ ಹೆಚ್ಚಿನ ಜ್ಞಾನ ಇದೆ. ಹೀಗಾಗಿ ಉಭಯ ತಂಡಗಳಲ್ಲಿ ಯಾರು ಪಿಚ್​ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವರು ಎಂಬುದು ನಿರ್ಣಾಯಕವಾಗಲಿದೆ.

ಮುಖಾಮುಖಿ: 32

ಆರ್​ಸಿಬಿ: 16

ರಾಜಸ್ಥಾನ: 14

ರದ್ದು: 2

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.