ಕ್ರೀಡೆ

'ಆರ್​ಸಿಬಿ ಪ್ಲೇ ಆಫ್‌ ಭರವಸೆ ಇನ್ನೂ ಜೀವಂತ': ಟಾಮ್ ಮೂಡಿ ಹೀಗೆನ್ನಲು ಕಾರಣವಿದೆ..

ನವದೆಹಲಿ: ಐಪಿಎಲ್‌ನಲ್ಲಿ ಆರ್​ಸಿಬಿ ಬೆಂಗಳೂರು ಇನ್ನೂ ಪ್ಲೇ ಆಫ್‌ ಭರವಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಈ ಸೀಸನ್​ನಲ್ಲಿ ಸತತ ಐದು ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆ ಬರೆದ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಹೇಳಿದ್ದಾರೆ .

ಮೂರು ವಾರಗಳ ಹಿಂದೆ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಅಂದಿನಿಂದ ಆರ್‌ಸಿಬಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸರಣಿಯು ಅವರಿಗೆ ಪ್ಲೇ ಆಫ್‌ಗೆ ಹೋಗಲು ಅವಕಾಶವನ್ನು ನೀಡಿದೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶನಿವಾರ ನಡೆಯಲಿರುವ ಆರ್​ಸಿಬಿ ಪಂದ್ಯವು ನಾಕೌಟ್ ಹಂತಕ್ಕೆ ಯಾರು ಹೋಗುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿದೆ. ಭಾರತ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ಮತ್ತು ಕೊಹ್ಲಿ ಎಂಬ ದೈತ್ಯರ ನಡುವೆ ಸೆಣೆಸಾಟ ಏರ್ಪಡಲಿದೆ. ಇಲ್ಲಿ ಏನಾದರೂ ಸಂಭವಿಸಬಹುದು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿ, ಏಳು ತಂಡಗಳು ಪ್ಲೇಆಫ್‌ಗಾಗಿ ಇನ್ನೂ ಪೈಪೋಟಿಯಲ್ಲಿವೆ. ವಾರಾಂತ್ಯದ ನಂತರ, ಒಂದೆರಡು ಫಲಿತಾಂಶಗಳು ಹೊರಬೀಳಲಿದ್ದು, ಆ ನಂತರ ಅಗ್ರ ನಾಲ್ಕರಲ್ಲಿ ಯಾವ ತಂಡ ಹೊರಬರುತ್ತದೆ ಎಂಬುದು ಸ್ಪಷ್ಟವಾಗಲಿದೆ ಎಂದರು.

"ಆದರೂ, ಇದು ಇನ್ನೂ ಯಾರ ಆಟವಾಗಿದೆ ಎಂದು ಹೇಳುವುದು ಕಷ್ಟ. ಯಾವುದೇ ತಂಡವು ಅನಿರೀಕ್ಷಿತವಾಗಿ ಟಾಪ್ ನಾಲ್ಕರಲ್ಲಿ ಸ್ಥಾನ ಗಳಿಸಬಹುದು ಎಂದು ಮೂಡಿ ಹೇಳಿದರು.